4ನೇ ಟೆಸ್ಟ್: ಪೂಜಾರ193, ಪಂತ್159, 622ಗೆ ಭಾರತ ಡಿಕ್ಲೇರ್ಡ್

ಈ ಸುದ್ದಿಯನ್ನು ಶೇರ್ ಮಾಡಿ

testಸಿಡ್ನಿ, ಜ.4- ಆಸ್ಟ್ರೇಲಿಯಾಕ್ಕೆ ಪ್ರತಿಷ್ಠಿತ ಪಂದ್ಯವಾಗಿ ಬಿಂಬಿಸಿಕೊಂಡಿರುವ ಸಿಡ್ನಿ ಟೆಸ್ಟ್‍ನಲ್ಲಿ ಭಾರತದ ಆಟಗಾರರಾದ ಚೇತೇಶ್ವರ ಪೂಜಾರ (193 ರನ್) ಹಾಗೂ ರಿಷಭ್‍ಪಂತ್ (159*ರನ್)ರ ಆಕರ್ಷಕ ಶತಕಗಳ ನೆರವಿನಿಂದ ವಿರಾಟ್ ಕೊಹ್ಲಿ ಪಡೆ 622 ಬೃಹತ್ ರನ್ ಗಳಿಸಿ ಡಿಕ್ಲೇರ್ಡ್ ಮಾಡಿಕೊಂಡಿದೆ.

ಆಸ್ಟ್ರೇಲಿಯಾ ಉತ್ತಮ ಹೋರಾಟ:  ರನ್‍ಗಳು ಸರಾಗವಾಗಿ ಹರಿದುಬರುತ್ತಿರುವ ಸಿಡ್ನಿ ಮೈದಾನದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರರಾದ ಹ್ಯಾರೀಸ್ (19 ರನ್, 2 ಬೌಂಡರಿ) ಹಾಗೂ ಉಸ್ಮಾನ್ ಖ್ವಾಜಾ (5 ರನ್) ಅದ್ಭುತ ಬ್ಯಾಟಿಂಗ್ ಪ್ರದರ್ಶಶಿಸಿ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ ತಂಡದ ಮೊತ್ತವನ್ನು 24 ರನ್‍ಗಳಿಗೆ ಮುಟ್ಟಿಸಿದರು.

ಅರ್ಧಶತಕ ವಂಚಿತ ವಿಹಾರಿ: ಅಂತಿಮ ಟೆಸ್ಟ್‍ನ ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 303 ರನ್‍ಗಳಿಂದ ಆಟವನ್ನು ಮುಂದುವರಿಸಿದ ಹನುಮವಿಹಾರಿ( 42 ರನ್, 5 ಬೌಂಡರಿ) ನಿನ್ನೆಯ ಮೊತ್ತಕ್ಕೆ 3 ರನ್‍ಗಳನ್ನು ಸೇರಿಸುವಷ್ಟರಲ್ಲಿ ಲಿಯಾನ್‍ಗೆ ವಿಕೆಟ್ ಒಪ್ಪಿಸುವ ಮೂಲಕ ಅರ್ಧಶತಕ ಗಳಿಸುವಲ್ಲಿ ಎಡವಿದರು.

ಪೂಜಾರ- ಪಂತ್ ಆರ್ಭಟ: ಹನುಮವಿಹಾರಿ ಔಟಾಗುತ್ತಿದ್ದಂತೆ ಮೈದಾನಕ್ಕಿಳಿದ ವಿಕೆಟ್‍ಕೀಪರ್ ರಿಷಭ್‍ಪಂತ್, ಪೂಜಾರ ಜೊತೆಗೂಡಿ ಆರ್ಭಟದ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಭೋಜನ ವಿರಾಮದ ವೇಳೆಗೆ ತಂಡದ ಮೊತ್ತವನ್ನು 389 ರನ್‍ಗಳ ಗುರಿ ಮುಟ್ಟಿಸಿದ್ದರು.  ಮೈ ಚಳಿ ಬಿಟ್ಟಂತೆ ಬ್ಯಾಟಿಂಗ್ ಪ್ರದರ್ಶಿಸಿದ ಚೇತೇಶ್ವರ ಪೂಜಾರ 22 ಬೌಂಡರಿಗಳ ಗಳಿಸುವ ಮೂಲಕ 193 ರನ್ ಗಳಿಸಿ ದ್ವಿಶತಕದ ಹಾದಿಯಲ್ಲಿದ್ದಾಗ ಲಿಯಾನ್‍ಗೆ ಕ್ಯಾಟ್ ಆ್ಯಂಡ್ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಆಗ ತಂಡದ ಮೊತ್ತ 418 ರನ್‍ಗಳಾಗಿತ್ತು. ಪಂತ್ ಹಾಗೂ ಪೂಜಾರ 6ನೆ ವಿಕೆಟ್‍ಗೆ 89 ರನ್‍ಗಳ ಜೊತೆಯಾಟ ನೀಡಿದರು.

ಜಾಡೇಜಾ- ಪಂತ್ ದ್ವಿಶತಕ ಜೊತೆಯಾಟ:  ಚೇತೇಶ್ವರ ಪೂಜಾರ ಔಟಾದರೂ ರನ್ ವೇಗವನ್ನು ಹೆಚ್ಜಿಸಿದ ಅಲೌಂಡರ್ ರವೀಂದ್ರಾ ಜಾಡೇಜಾ ಹಾಗೂ ಪಂತ್ ಆಸ್ಟ್ರೇಲಿಯಾದ ವೇಗ ಹಾಗೂ ಸ್ಪಿನ್ ದಾಳಿಯನ್ನು ದಿಟ್ಟವಾಗಿ ಎದುರಿಸಿ 7ನೆ ವಿಕೆಟ್‍ಗೆ 204 ರನ್‍ಗಳ ಜೊತೆಯಾಟ ನೀಡಿದರು.  ಪೈಪೋಟಿ ಬಿದ್ದಂತೆ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ಪಂತ್ ಹಾಗೂ ಜಾಡೇಜಾ ಜೋಡಿಯನ್ನು ಬೇರ್ಪಡಿಸಲು ಆಸ್ಟ್ರೇಲಿಯಾ ನಾಯಕ ಪೇನ್ ಮಾಡಿದ ತಂತ್ರಗಳನ್ನೆಲ್ಲಾ ಬುಡಮೇಲು ಮಾಡಿದ ಜಾಡೇಜಾ ಟೆಸ್ಟ್ ಜೀವನದಲ್ಲಿ ತಮ್ಮ 9ನೆ ಅರ್ಧಶತಕ ಗಳಿಸಿದರೆ, ಪಂತ್ ಆಕರ್ಷಕ ಶತಕ (159* ರನ್, 15 ಬೌಂಡರಿ, 1 ಸಿಕ್ಸ್) ಸಿಡಿಸಿದರು.

7 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ ಆಕರ್ಷಕ 81 ರನ್ ಗಳಿಸಿ ಶತಕದ ಅಂಚಿನಲ್ಲಿದ್ದ ಜಾಡೇಜಾ ಲಿಯಾನ್ ಬೌಲಿಂಗ್‍ನಲ್ಲಿ ಬೌಂಡರಿಗಟ್ಟುವ ರಭಸದಲ್ಲಿ ಬೌಲ್ಡ್ ಆಗುತ್ತಿದ್ದಂತೆ ಭಾರತ 622 ರನ್‍ಗಳಿಗೆ ತಮ್ಮ ಪ್ರಥಮ ಇನ್ನಿಂಗ್ಸ್ ಡಿಕ್ಲೇರ್ಡ್ ಮಾಡಿಕೊಂಡಿತು. ಆಗ ಭಾರತದ 7 ವಿಕೆಟ್‍ಗಳು ಉರುಳಿದ್ದವು.  ಆಸ್ಟ್ರೇಲಿಯಾ ಪರ ನ್ಯಾಥನ್ ಲಿಯಾನ್- 4 ವಿಕೆಟ್, ಹೇಜಲ್‍ವುಡ್-2 ವಿಕಟ್ ಹಾಗೂ ಸ್ಟ್ರಾಕ್-1 ವಿಕೆಟ್ ಕೆಡವಿದರು.

Facebook Comments