ಕಳ್ಳರಿಗೆ ವರದಾನವಾದಂತಹ ಕೆಟ್ಟು ನಿಂತ ಸಿಸಿ ಕ್ಯಾಮೆರಾಗಳು

ಈ ಸುದ್ದಿಯನ್ನು ಶೇರ್ ಮಾಡಿ

CC cameraಚಳ್ಳಕೆರೆ, ಜ.7- ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು , ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ. ಕಳ್ಳತನ ಸೇರಿದಂತೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನಗರಸಭೆ ಅನುದಾನದಲ್ಲಿ ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ಸುಮಾರು 20 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಆದರೆ ಈ ಕ್ಯಾಮೆರಾಗಳು ಕೆಟ್ಟು ಹೋಗಿ ವರ್ಷಗಳೇ ಕಳೆದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇವುಗಳನ್ನು ರಿಪೇರಿ ಮಾಡಿಸದೆ ಇರುವುದು ಪೊಲೀಸ್ ಇಲಾಖೆ ಎಷ್ಟರ ಮಟ್ಟಿಗೆ ಕರ್ತವ್ಯ ನಿರ್ವಹಿಸುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಇತ್ತೀಚೆಗೆ ನಗರದಲ್ಲಿ ಹಾಡುಹಗಲೇ ಕಳ್ಳತನಗಳು ನಡೆಯುತ್ತಿವೆ. ಇತ್ತಿಚೆಗೆ ಡಿವೈಎಸ್ಪಿ ಕಚೇರಿ ಬಳಿಯೇ ವಾಯುವಿಹಾರ ನಡೆಸುತ್ತಿದ್ದ ಮಹಿಳೆಯ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಘಟನೆ ಮಾಸುವ ಮುನ್ನವೇ ಶನಿವಾರ ಮಧ್ಯಾಹ್ನದ ವೇಳೆ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸಿದ್ದ ಇಬ್ಬರು ಸವಾರರು ಮನೆ ಮುಂದೆ ಕುಳಿತಿದ್ದ ವೃದ್ಧೆ ಗಂಗಮ್ಮ ಬಳಿ ಬಂದು ವಿಳಾಸ ಕೇಳುವ ನೆಪದಲ್ಲಿ ಸುಮಾರು 40 ಗ್ರಾಂ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದಾರೆ. ಕೂಡಲೇ ಗಂಗಮ್ಮ ಕಿರುಚಿಕೊಂಡಾಗ ಅಕ್ಕ ಪಕ್ಕದಲ್ಲಿದ್ದ ಸಾರ್ವಜನಿಕರು ಹಿಡಿಯಲು ಪ್ರಯತ್ನಿಸಿದರೂ ಸಿಗದೆ ವಾಲ್ಮೀಕಿ ವೃತ್ತದಲ್ಲಿ ಹಾದು ಹೋಗಿದ್ದಾರೆ. ಈ ವೃತ್ತದಲ್ಲಿ ಸಿಸಿ ಕ್ಯಾಮೆರಾ ಇದೆ.

ಆದರೆ ಈ ಕ್ಯಾಮೆರಾಗಳು ಕೆಟ್ಟು ಹೋಗಿರುವುದರಿಂದ ಈಗ ಕಳ್ಳರನ್ನು ಗುರುತಿಸಲು ಆಗುತ್ತಿಲ್ಲ. ಪೊಲೀಸರು ಕಳೆದೆರಡು ದಿನಗಳಿಂದ ಖಾಸಗಿ ವ್ಯಕ್ತಿಗಳು ಅಳವಡಿಸಿರುವ ಸಿಸಿ ಕ್ಯಾಮೆರಾಗಳ ಮೊರೆ ಹೋಗುವುದು ವಿಪರ್ಯಾಸ.ಸರ್ಕಾರದ ಅನುದಾನದಲ್ಲಿ ಲಕ್ಷಾಂತರ ಖರ್ಚು ಮಾಡಿ ನಗರದಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾಗಳ ಬಗ್ಗೆ ನಿಗಾ ವಹಿಸಿದ್ದರೆ ಇಂತಹ ಘಟನೆಗಳಿಗೆ ಕಡಿವಾಣ ಹಾಕಬಹುದಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಚಳ್ಳಕೆರೆ ನಗರ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದು, ತಾಲ್ಲೂಕಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ನಿರ್ಮಾಣಗೊಳ್ಳುತ್ತಿವೆ. ಅಲ್ಲದೆ, ವ್ಯಾಪಾರ ವಹಿವಾಟುಗಳು ಹೆಚ್ಚಾಗಿ ನಡೆಯುವ ಕಾರಣ ಕೂಡಲೇ ಪೊಲೀಸರು ಇಂತಹ ದುಷ್ಕøತ್ಯಗಳನ್ನು ಮಟ್ಟ ಹಾಕಲು ಮುಂದಾಗಬೇಕಿದೆ. ಅಲ್ಲದೆ, ಸಿಸಿ ಕ್ಯಾಮೆರಾಗಳನ್ನು ದುರಸ್ತಿಗೊಳಿಸಿ ಸಾರ್ವಜನಿಕರು ನಿರ್ಭಯವಾಗಿ ಓಡಾಡುವಂತಹ ವಾತಾವರಣ ನಿರ್ಮಾಣವಾಗಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Facebook Comments