ಆತ್ಮಹತ್ಯೆಗೆ ಯತ್ನಿಸಿದ್ದ ಶಾಸಕ ಗೂಳಿಹಟ್ಟಿ ಶೇಖರ್ ಬಚಾವ್

ಈ ಸುದ್ದಿಯನ್ನು ಶೇರ್ ಮಾಡಿ

Goolihatti-shekahr--01

ಚಿತ್ರದುರ್ಗ. ಜ. 07 : ಮಾಜಿ ಸಚಿವ ಹಾಗೂ ಹೊಸದುರ್ಗ ಹಾಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಡೆದಿದೆ. ಅಕ್ರಮ ಮರಳು ದಂಧೆ ವಿರುದ್ಧ ಇತ್ತೀಚೆಗೆ ದೊಡ್ಡ ಸಮರವನ್ನೇ ಸಾರಿದ್ದ ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಇದೇ ವಿಚಾರವಾಗಿ ಇಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಮರಳು ಸಾಗಿಸಲು ಪರ್ಮಿಟ್ ಪಡೆದರು ಪೊಲೀಸರು ಅನಗತ್ಯವಾಗಿ ತಮ್ಮ ಬೆಂಬಲಿಗರ ವಿರುದ್ಧ ಕೇಸ್ ದಾಖಲಿಸುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಇಂದು ಹೊಸದುರ್ಗ ಪೊಲೀಸ್ ಠಾಣೆ ಮುಂದೆ ಗೂಳಿಹಟ್ಟಿ ಶೇಖರ್ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು.

ಈ ವೇಳೆ ಗೂಳಿಹಟ್ಟಿ ಶೇಖರ್ ಅವರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿಹಚ್ಚಿಕೊಳ್ಳಲು ಯತ್ನಿಸಿದಾಗ ಬೆಂಬಲಿಗರು ಅದನ್ನು ತಡೆದಿದ್ದಾರೆ. ಗೂಳಿಹಟ್ಟಿ ಶೇಖರ್ ಅವರ ಕಿವಿ, ಮೂಗು, ಬಾಯೊಳಗೆ ಪೆಟ್ರೋಲ್ ಹರಿದುಹೋಗಿದೆ. ಬೆಂಬಲಿಗರು ಸರಿಯಾದ ಸಮಯಕ್ಕೆ ಅವರನ್ನು ತಡೆಯದೇ ಹೋಗಿದ್ದರೆ ಬೆಂಕಿ ಕಡ್ಡಿ ಗೀರಿಕೊಂಡಿರುತ್ತಿದ್ದರೆನ್ನಲಾಗಿದೆ. ಗೂಳಿಹಟ್ಟಿ ಶೇಖರ್ ಅವರನ್ನು ಸದ್ಯಕ್ಕೆ ಹೊಸದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಸಚಿವರಾಗಿದ್ದ ಗೂಳಿಹಟ್ಟಿ ಶೇಖರ್ ಅವರು ಈಗ್ಗೆ ಕೆಲವಾರು ದಿನಗಳಿಂದ ಮರಳು ದಂಧೆಯ ವಿಚಾರದಲ್ಲಿ ಪೊಲೀಸರು ಮತ್ತು ಜಿಲ್ಲಾಡಳಿತ ವಿರುದ್ಧ ನಿರಂತರ ಹೋರಾಟ ಮಾಡುತ್ತಾ ಬಂದಿದ್ದಾರೆ. ಈ ಹಿಂದೆ ಇವರು ವಿಧಾನಸಭೆಯಲ್ಲಿ ಬಟ್ಟೆ ಹರಿದುಕೊಂಡು ರಂಪಾಟ ಮಾಡಿದ್ದನ್ನು ಇಲ್ಲಿ ನೆನೆಯಬಹುದು.

 

Facebook Comments

Sri Raghav

Admin