ಭಾರತೀಯ ರಾಯಭಾರಿ ಕಚೇರಿಗಳಲ್ಲಿ ಶಂಕಾಸ್ಪದ ಪ್ಯಾಕೆಟ್‍ಗಳು ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Indian--101

ಮೆಲ್ಬೊರ್ನ್, ಜ.9-ಆಸ್ಟ್ರೇಲಿಯಾ ಮೆಲ್ಬೊರ್ನ್‍ನ ಭಾರತೀಯ ರಾಯಭಾರಿ ಕಚೇರಿ ಸೇರಿದಂತೆ ಹಲವಾರು ರಾಜತಾಂತ್ರಿಕ ಕಾರ್ಯಾಲಯಗಳಲ್ಲಿ ಇಂದು ಶಂಕಾಸ್ಪದ ಪ್ಯಾಕೇಜ್‍ಗಳು ಪತ್ತೆಯಾಗಿ ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು.

ಇಂಡಿಯನ್ ಕಾನ್ಸುಲೇಟ್ ಸೇರಿದಂತೆ ಹಲವು ಡಿಪ್ಲೊಮ್ಯಾಟಿಕ್ ಮಿಷನ್‍ಗಳಲ್ಲಿ ಇಂಥ ಪ್ಯಾಕೆಟ್‍ಗಳು ಪತ್ತೆಯಾದ ನಂತರ ಆಸ್ಟ್ರೇಲಿಯಾ ಅಧಿಕಾರಿಗಳು ತುರ್ತು ಕ್ರಮಗಳನ್ನು ಕೈಗೊಂಡು ಅವುಗಳನ್ನು ತಪಾಸಣೆಗೆ ಒಳಪಡಿಸಿದರು. ಇವುಗಳಲ್ಲಿ ಏನಿತ್ತು ಎಂಬುದನ್ನು ಪೊಲೀಸ್ ಇಲಾಖೆ ಈವರೆಗೆ ಬಹಿರಂಗಗೊಳಿಸಿಲ್ಲ. ಮೆಲ್ಬೊರ್ನ್‍ನ ಕನಿಷ್ಠ 10 ಅಂತಾರಾಷ್ಟ್ರೀಯ ರಾಜತಾಂತ್ರಿಕ ಕಾರ್ಯಾಲಯಗಳಲ್ಲಿ ಇಂಥ ಪ್ಯಾಕೆಟ್‍ಗಳು ವಿತರಣೆಯಾದ ನಂತರ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಯಿತು.

ಈ ಸುದ್ದಿ ತಿಳಿಯುತ್ತಿದ್ದಂತೆ ಸೇಂಟ್ ಕಿಲ್ಡಾ ರಸ್ತೆಯಲ್ಲಿರುವ ಭಾರತ ಮತ್ತು ಅಮೆರಿಕ ರಾಯಭಾರಿ ಕಚೇರಿಗಳನ್ನು ಪೊಲೀಸರು, ಅಗ್ನಿಶಾಮಕ ದಳ ಮತ್ತು ವೈದ್ಯಕೀಯ ಸಿಬ್ಬಂದಿ ಸುತ್ತುವರಿದ ದೃಶ್ಯಗಳನ್ನು ಮಾಧ್ಯಮಗಳು ಬಿತ್ತರಿಸಿವೆ. ರಾಸಾಯನಿಕ ಪ್ರತಿರೋಧಕ ವಸ್ತ್ರಗಳನ್ನು ಧರಿಸಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದ ದೃಶ್ಯಗಳು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.

ಸಂಶಯಾಸ್ಪದ ಪ್ಯಾಕೇಜ್‍ಗಳು ಮತ್ತು ಪ್ಯಾಕೆಟ್‍ಗಳನ್ನು ವಶಪಡಿಸಿಕೊಂಡು ಅವುಗಳನ್ನು ತುರ್ತು ಸೇವೆಗಳ ಸಿಬ್ಬಂದಿ ಪರಿಶೀಲಿಸಿ ಪ್ರಯೋಗಾಲಯಗಳಿಗೆ ಕಳುಹಿಸಿದ್ಧಾರೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಮೆಲ್ಬೊರ್ನ್ ಪೊಲೀಸ್ ಇಲಾಖೆ ಮುಖ್ಯಸ್ಥರು ತಿಳಿಸಿದ್ದಾರೆ. ವರದಿ ಬಂದ ನಂತರವಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಸಿಡ್ನಿಯ ಆರ್ಜೆಂಟೈನಾ ರಾಯಭಾರಿ ಕಚೇರಿಯಲ್ಲಿ ಬಿಳಿ ರಾಸಾಯನಿಕ ಪುಡಿ ಪತ್ತೆಯಾದ ಎರಡು ದಿನಗಳ ನಂತರ ಈ ಸಂಶಯಾಸ್ಪದ ಪ್ಯಾಕೆಟ್‍ಗಳು ಕಂಡುಬಂದಿದ್ದು, ಆತಂಕ ಸೃಷ್ಟಿಸಿದೆ.

Facebook Comments

Sri Raghav

Admin