ನಿರ್ದೇಶಕರ ನೂತನ ಕಚೇರಿ ಉದ್ಘಾಟನೆ

ಈ ಸುದ್ದಿಯನ್ನು ಶೇರ್ ಮಾಡಿ

Director's new officeಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಹುಟ್ಟು ಹಾಕಿದ್ದ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಚಿತ್ರರಂಗದಲ್ಲಿ ಅನೇಕ ಸಾಧನೆಗಳಿಗೆ ಮುನ್ನುಡಿ ಬರೆದಿದೆ. ಈಗ ಸಂಘದ ಅಧ್ಯಕ್ಷರಾಗಿ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಈವರಗೆ ವಿಜಯನಗರದಲ್ಲಿ ತನ್ನ ಕಾರ್ಯ ನಿರ್ವಹಿಸುತ್ತಿದ್ದ ಸಂಘದ ಕಛೇರಿ ಈಗ ನಾಗರಭಾವಿ ಎರಡನೆ ಹಂತಕ್ಕೆ ಸ್ಥಳಾಂತರಗೊಂಡಿದೆ.

ನಾಗರಭಾವಿಯಲ್ಲಿ ಸಂಘದ ಹೊಸ ಕಚೇರಿಯನ್ನು ಆರಂಭಿಸಲಾಗಿದ್ದು ಅದರ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಚಲನಚಿತ್ರ ನಿರ್ದೇಶಕರ ಸಂಘದ ನೂತನ ಕಚೇರಿಯನ್ನು ರಿಯಲ್ ಸ್ಟಾರ್ ಉಪೇಂದ್ರ ಅವರು ಉದ್ಘಾಟಿಸಿದರು. ಕಿಚ್ಚ ಸುದೀಪ್ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.
ರಮೇಶ್ ಅರವಿಂದ್ ಅವರು ನಿರ್ದೇಶಕರ ಸಂಘದ ವತಿಯಿಂದ ಏರ್ಪಡಿಸಲಾಗುವ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರೆ, ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಹೊಸ ಕ್ಯಾಂಲೆಂಡರ್‍ಅನ್ನು ಬಿಡುಗಡೆಗೊಳಿಸಿದರು.

ಹಿರಿಯ ನಿರ್ದೇಶಕ ದೊರೆ ಭಗವಾನ್ ಖ್ಯಾತಿಯ ಭಗವಾನ್ ನಿರ್ದೇಶಕರ ಸಂಘ ಹೊರತಂದಿರುವ ನೂತನ ಡೈರಿಯನ್ನು ಬಿಡುಗಡೆ ಮಾಡಿದರು. ಸಂಘದ ವೆಬ್‍ಸೈಟ್‍ನ್ನು ಹಿರಿಯ ನಿರ್ದೇಶಕ ರೇಣುಕಾ ಶರ್ಮ ಅವರು ಅನಾವರಣಗೊಳಿಸಿದರು. ಹೊಸ ಕ್ಯಾಲೆಂಡರ್‍ನಲ್ಲಿ ಪ್ರಮುಖ ನಟರು ಮತ್ತು ನಿರ್ದೇಶಕರ ಜನ್ಮದಿನವನ್ನು ಉಲ್ಲಾಖಿಸಲಾಗಿದೆ. ಎಲ್ಲಾ ನಿರ್ದೇಶಕರು ತಮ್ಮ ಮನೆಯಲ್ಲಿ ಈ ಕ್ಯಾಲೆಂಡರ್ ಬಳಕೆ ಮಾಡುವಂತೆ ನಿರ್ದೇಶಕರಲ್ಲಿ ಮನವಿ ಮಾಡಲಾಯಿತು.

ಈ ಹಿಂದೆ ನಿರ್ದೇಶಕರ ಸಂಘವು ಹುಟ್ಟಿದ್ದ ಸಂದರ್ಭವನ್ನು ನೆನಪು ಮಾಡಿಕೊಂಡ ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ಹಾಗೆಯೇ ನಿರ್ದೇಶಕ ಎಲ್.ವಿ. ಪ್ರಸಾದ್ ಅವರು ನನಗೆ ಫಾಲ್ಕೆ ಪ್ರಶಸ್ತಿಗಿಂತ ನಿರ್ದೇಶಕರ ಸಂಘವು ನೀಡುವ ಗೌರವ ದೊಡ್ಡದಿದೆ ಎಂದು ಹೇಳಿದ್ದರು. ಆದಷ್ಟು ಬೇಗನೇ ಸಂಘದ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡುವ ಭರವಸೆ ವ್ಯಕ್ತಪಡಿಸಿದ ಅಧ್ಯಕ್ಷ ವಿ. ನಾಗೇಂದ್ರ ಪ್ರಸಾದ್ ಅವರು ಎಲ್ಲಾ ಅಂಗ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿದರೆ ನಮ್ಮ ಸಂಘವು ಹೆಚ್ಚಿನ ಮಟ್ಟದಲ್ಲಿ ಅಭಿವೃದ್ದಿಗೊಳ್ಳುತ್ತದೆ.

ಹಾಲಿ ಸಂಘದಲ್ಲಿ ನಿರ್ದೇಶನ, ಅಭಿನಯ, ನೃತ್ಯ ಮತ್ತು ಸಂಗೀತದ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಸಂಘದ ಸದಸ್ಯತ್ವ ಹೊಂದಿದವರಿಗೆ ಆರ್ಥಿಕ, ನೈತಿಕವಾಗಿಯೂ ಸಹಾಯ ಮಾಡುತ್ತೇವೆ. ಸದಸ್ಯರಿಗೆ ಆರೋಗ್ಯವಿಮೆ ಮಾಡಿಸಲು ಕೂಡ ಚಿಂತನೆ ನಡೆಸಲಾಗಿದೆ. ಭಾರತದಲ್ಲೇ ಮೊಟ್ಟ ಮೊದಲು ನಿರ್ದೇಶಕರ ಸಂಘವನ್ನು ನಾವು ಆರಂಭಿಸಿದ್ದು ಹೆಮ್ಮೆಯ ವಿಷಯವಾಗಿದೆ ಎಂದರು.

ನಟ ಸುದೀಪ್ ಮಾತನಾಡಿ, ಸಂಘದ ಬಾಡಿಗೆ ಕಟ್ಟಡವು ಬೇಗನೇ ಸ್ವಂತದ್ದಾಗಲಿ. ನನ್ನ ಕಡೆಯಿಂದ ಪ್ರೋತ್ಸಾಹ ನೀಡಲು ಸಿದ್ಧ ಎಂದರು. ಹಿರಿಯ ನಿರ್ದೇಶಕರಾದ ಭಗವಾನ್, ಗಿರೀಶ್ ಕಾಸರವಳ್ಳಿ ಮತ್ತು ರೇಣುಕಾ ಶರ್ಮ ಮಾತನಾಡಿ, ಸಂಘದ ಏಳಿಗೆಗಾಗಿ ಮುಂದಿನ ಪೀಳಿಗೆಯವರು ಶ್ರಮಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು. ನಿರ್ಮಾಪಕ ಜಾಕ್ ಮಂಜು, ಎಸ್. ನಾರಾಯಣ್, ಜೊಸೈಮನ್ ಸೇರಿದಂತೆ ಹಲವು ಹಿರಿಯ, ಕಿರಿಯ ನಿರ್ದೇಶಕರು ಹಾಜರಿದ್ದರು.

Facebook Comments