ಮಲಗುವ ಮುನ್ನ 1 ಗ್ಲಾಸ್ ಹಾಲು ಏಕೆ ಕುಡಿಬೇಕು..?

ಈ ಸುದ್ದಿಯನ್ನು ಶೇರ್ ಮಾಡಿ

Milk

ಸಾಮಾನ್ಯವಾಗಿ, ನಮ್ಮ ಜೀವಮಾನವಿಡೀ ನಮಗೆ ಬೋಧಿಸಲ್ಪಡುವ ಒಂದು ಮಂತ್ರವೆಂದರೆ “ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿದು ಮಲಗಿ”, ಅದರಲ್ಲೂ ಮಕ್ಕಳಿಗೆ ಪಾಲಕರು ಈ ಮಾತನ್ನು ಹೇಳುವ ಜೊತೆಗೇ ಇದರ ಪ್ರಯೋಜನಗಳನ್ನೂ, ಶರೀರದ ಬೆಳವಣಿಗೆಗೆ ಹಾಲಿನ ಅನಿವಾರ್ಯತೆಯ ಬಗ್ಗೆ ತಪ್ಪದೇ ತಿಳಿಸುತ್ತಾರೆ.

ಹಾಲು ಕ್ಯಾಲ್ಸಿಯಂ, ವಿಟಮಿನ್ ಎ, ವಿಟಮಿನ್ ಡಿ ಮೊದಲಾದ ಅವಶ್ಯಕ ಪೋಷಕಾಂಶಗಳನ್ನು ಹೊಂದಿರುವ ಒಂದು ಪರಿಪೂರ್ಣವಾದ ಮತ್ತು ಆರೋಗ್ಯಕರವಾದ ಆಹಾರವಾಗಿದ್ದು ಮಕ್ಕಳಿಗೆ ಮಾತ್ರವಲ್ಲ, ಹಿರಿಯರಿಂದ ವೃದ್ದರವರೆಗೆ ಎಲ್ಲರ ಆರೋಗ್ಯಕ್ಕೂ ಪೂರಕವಾಗಿದೆ. ಆಹಾರತಜ್ಞರ ಪ್ರಕಾರ ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದು ಒಳ್ಳೆಯದು ಎನ್ನಲು ಕಾರಣವೇನೆಂದರೆ ಇದರಲ್ಲಿರುವ ಟ್ಪ್ರಿಪ್ಟೋಫ್ಯಾನ್ ಎಂಬ ಪೋಷಕಾಂಶ ಜೀರ್ಣಕ್ರಿಯೆಯ ಬಳಿಕ ಸೆರೋಟೋನಿನ್ ಎಂಬ ರಸದೂತವಾಗಿ ಪರಿವರ್ತಿತವಾಗುವುದು.

ಗಾಢ ಮತ್ತು ಸೊಂಪಾದ ನಿದ್ದೆಗೆ ಈ ರಸದೂತದ ಇರುವಿಕೆ ಅವಶ್ಯ. ಅದರಲ್ಲೂ ಹಾಲು ಕೊಂಚ ಬಿಸಿಯಾಗಿದ್ದರೆ ಸೇವಿಸಿದ ತಕ್ಷಣವೇ ಮಾನಸಿಕವಾಗಿ ನಿರಾಳತೆಯನ್ನು ನೀಡುತ್ತದೆ ಹಾಗೂ ದೇಹದ ಒತ್ತಡವನ್ನೂ ನಿರಾಳವಾಗಿಸುವ ಮೂಲಕ ಹಾಯಾದ ಅನುಭವ ನೀಡುತ್ತದೆ.

ಅಷ್ಟೇ ಅಲ್ಲ, ರಾತ್ರಿ ನಿದ್ದೆಯ ಸಮಯದಲ್ಲಿ ಟ್ಪ್ರಿಪ್ಟೋಫ್ಯಾನ್ ಜೀರ್ಣಗೊಳ್ಳುವ ವೇಳೆ ಮೆಲಟೋನಿನ್ ಎಂಬ ಪೋಷಕಾಂಶವೂ ಉತ್ಪತ್ತಿಯಾಗುತ್ತದೆ. ಈ ಮೆಲಟೋನಿನ್ ಮೆದುಳು ನಿದ್ದೆಯ ಸಮಯದಲ್ಲಿ ಕೇವಲ ನಿದ್ದೆಗೆ ಪೂರಕ ಕೆಲಸವನ್ನು ಮಾತ್ರವೇ ನಿರ್ವಹಿಸಲು ನೆರವಾಗುತ್ತದೆ. ಆದ್ದರಿಂದ ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದನ್ನು ಹಿರಿಯರ ಸಹಿತ ವೈದ್ಯರೂ ಶಿಫಾರಸ್ಸು ಮಾಡುತ್ತಾರೆ.

ಈ ಮೂಲಕ ನಿದ್ದೆ ಮಾಡಬೇಕಾದ ಸಮಯದಲ್ಲಿ ನಿದ್ದೆಗೆಡಬೇಕಾಗಿ ಬರುವ ಹಾಗೂ ತನ್ಮೂಲಕ ಎದುರಿಸಬೇಕಾದ ಇತರ ತೊಂದರೆಗಳಿಂದ ರಕ್ಷಣೆ ಪಡೆಯಬಹುದು. ಹಾಲಿನಲ್ಲಿರುವ ಕಾರ್ಬೋಹೈಡ್ರೇಟುಗಳು ಮತ್ತು ಆರೋಗ್ಯಕರ ಕೊಬ್ಬುಗಳು ದೇಹದಲ್ಲಿರುವ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುವ ಮೂಲಕ ದೇಹದಲ್ಲಿ ಉತ್ಪತ್ತಿಯಾದ ಟ್ಪ್ರಿಪ್ಟೋಫ್ಯಾನ್ ರಸದೂತವನ್ನು ಮೆದುಳಿನ ಸಹಿತ ದೇಹದ ಇತರ ಭಾಗಗಳಿಗೂ ಪರಿಚಲಿಸುವಂತೆ ಮಾಡುತ್ತದೆ ಹಾಗೂ ಈ ಮೂಲಕವೂ ಗಾಢನಿದ್ದೆ ಪಡೆಯಲು ನೆರವಾಗುತ್ತದೆ.

# ಚೆನ್ನಾಗಿ ನಿದ್ದೆ ಬರುತ್ತದೆ
ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲು ಕುಡಿಯುವುದರಿಂದ ಗಾಢ ನಿದ್ದೆ ಆವರಿಸುತ್ತದೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಯೂ ಇದೆ. ಆದರೆ ವಯಸ್ಸಿಗನುಗುಣವಾಗಿ ಇದರ ಪರಿಣಾಮದಲ್ಲಿ ಕೊಂಚ ವ್ಯತ್ಯಾಸವೂ ಇದೆ. ಮಕ್ಕಳಲ್ಲಿ ಬೆಳವಣಿಗೆಗೆ ಹಾಲು ಹೆಚ್ಚಿನ ನೆರವು ನೀಡುತ್ತದೆ. ಇದಕ್ಕಾಗಿ ಪರಿಪೂರ್ಣ ಹಾಲು ಅಥವಾ ಕೊಬ್ಬುಯುಕ್ತ ಹಾಲು ಸೂಕ್ತ. ಆದರೆ ಸುಮಾರು ಮೂವತ್ತು ಮೂವತ್ತೈದು ವರ್ಷಗಳ ಬಳಿಕ ಈ ಕೊಬ್ಬುಯುಕ್ತ ಹಾಲಿನ ಸೇವನೆಯಿಂದ ದೇಹದ ತೂಕ ಅನಗತ್ಯವಾಗಿ ಏರತೊಡಗುತ್ತದೆ.

ಹಾಗಾಗಿ ನಡುವಯಸ್ಸಿನವರಿಗೆ ಕೊಬ್ಬು ರಹಿತ ಅಥವಾ ಹಾಲಿನ ಪುಡಿಯಿಂದ ತಯಾರಿಸಿದ (ಸ್ಕಿಮ್ಡ್ ಮಿಲ್ಕ್) ಹಾಲಿನ ಸೇವನೆ ಸೂಕ್ತ. ಅಲ್ಲದೇ, ಕೆಲವು ವ್ಯಕ್ತಿಗಳಿಗೆ ಹಾಲಿನಲ್ಲಿರುವ ಲ್ಯಾಕ್ಟೋಸ್ ಒಗ್ಗದೇ ಹೋಗಬಹುದು, ಈ ವ್ಯಕ್ತಿಗಳು ವೈದ್ಯರ ಸಲಹೆ ಪಡೆದೇ ಸೂಕ್ತ ಪ್ರಮಾಣದ ಮತ್ತು ಗುಣಮಟ್ಟದ ಹಾಲನ್ನು ಸೇವಿಸಬೇಕು.

# ರಾತ್ರಿ ಮಲಗುವ ಸುಮಾರು ಹದಿನೈದು ನಿಮಿಷಗಳ ಮುನ್ನ ಹಾಲು ಕುಡಿಯಬೇಕು
ರಾತ್ರಿ ಮಲಗುವ ಸುಮಾರು ಹದಿನೈದು ನಿಮಿಷಗಳ ಮುನ್ನ ಕುಡಿಯುವುದು ಅತ್ಯುತ್ತಮ. ಅಷ್ಟೇ ಅಲ್ಲ, ರಾತ್ರಿಯ ಊಟಕ್ಕೂ ಮುನ್ನ ಬಿಸ್ಕತ್, ಕುಕ್ಕೀಸ್ ಮೊದಲಾದ ಅತಿ ಹೆಚ್ಚಿನ ಸಕ್ಕರೆ ಮತ್ತು ಪೋಷಕಾಂಶಗಳಿರುವ ಆಹಾರವನ್ನು ಸೇವಿಸಬಾರದು, ಇದರಿಂದ ಜೀರ್ಣಾಂಗಗಳು ಅನಿವಾರ್ಯವಾಗಿ ತಮ್ಮ ಕೆಲಸವನ್ನು ಮುಂದುವರೆಸಬೇಕಾಗುತ್ತದೆ ಹಾಗೂ ನಿದ್ದೆಗೆ ಅಡ್ಡಿಯಾಗುತ್ತದೆ.

# ಆರೋಗ್ಯವನ್ನು ಉತ್ತಮಗೊಳಿಸುತ್ತದೆ
ಮಲಗುವ ಮುನ್ನ ಕುಡಿಯುವ ‘ಒಂದು ಲೋಟ ಹಾಲು’ ಕೇವಲ ನಿದ್ದೆಯ ಗುಣಮಟ್ಟವನ್ನು ಹೆಚ್ಚಿಸುವುದು ಮಾತ್ರವಲ್ಲ, ನಿದ್ದೆಯ ಸಮಯದಲ್ಲಿ ಜರುಗುವ ಹಲವಾರು ಅನೈಚ್ಛಿಕ ಕಾರ್ಯಗಳನ್ನು ಸುಲಲಿತವಾಗಿ ಸಾಗಲು ನೆರವಾಗುವ ಮೂಲಕ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಹಾಲಿನಲ್ಲಿ ನೀರು, ಪ್ರೋಟೀನ್, ಖನಿಜಗಳು, ಅಮೈನೋ ಆಮ್ಲಗಳು, ಹೈಡ್ರೇಟುಗಳು ಮೊದಲಾದ ಹಲವಾರು ಅವಶ್ಯಕ ಪೋಷಕಾಂಶಗಳಿದ್ದು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಇವೂ ಗಾಢನಿದ್ದೆಗೆ ಪರೋಕ್ಷವಾಗಿ ನೆರವಾಗುತ್ತವೆ ಹಾಗೂ ರಾತ್ರಿಯಿಡೀ ಭಂಗವಿಲ್ಲದ ಗಾಢನಿದ್ದೆ ಪಡೆಯಲು ಸಾಧ್ಯವಾಗುತ್ತದೆ.

ಹಾಲಿನಲ್ಲಿರುವ ಕೆಲವು ಪೋಷಕಾಂಶಗಳು : 

# ಟ್ಪ್ರಿಪ್ಟೋಫ್ಯಾನ್  : ಇದೊಂದು ಪ್ರಮುಖ ಅಮೈನೋ ಆಮ್ಲವಾಗಿದ್ದು ದೇಹದ ಹಲವು ರಸದೂತಗಳನ್ನು ನಿಯಂತ್ರಿವುದು ಇದರ ಪ್ರಮುಖ ಕಾರ್ಯವಾಗಿದೆ. ರಕ್ತದ ಮೂಲಕ ಮೆದುಳಿಗೆ ಆಗಮಿಸುವ ಟ್ಪ್ರಿಪ್ಟೋಫ್ಯಾನ್ ಸೆರೋಟೋನರ್ಜಿಕ್ ನ್ಯೂರಾನ್ ಎಂಬ ಭಾಗದಲ್ಲಿ ಸೆರೋಟೋನಿನ್ ಎಂಬ ರಸದೂತವಾಗಿ ಪರಿವರ್ತಿತವಾಗುತ್ತದೆ. ಈ ಮೂಲಕ ಮೆಲಟೋನಿನ್ ಉತ್ಪಾದನೆಗೆ ಪ್ರಚೋದನೆ ದೊರಕುತ್ತದೆ. ಮೆಲಟೋನಿನ್ ನ ಪ್ರಮುಖ ಕಾರ್ಯವೆಂದರೆ ಯಾವಾಗ ಮಲಗಬೇಕು ಮತ್ತು ಯಾವಾಗ ಎಚ್ಚರಗೊಳ್ಳಬೇಕು ಎಂಬುದನ್ನು ನಿರ್ಧರಿಸುವುದಾಗಿದೆ.ಈ ಮೆಲಟೋನಿನ್ ಬೆಳಕಿಗೆ ಪ್ರತಿಕ್ರಿಯಿಸುವ ಗುಣ ಹೊಂದಿದ್ದು ಬೆಳಕು ಕ್ಷೀಣವಾದಾಗ (ಅಂದರೆ ರಾತ್ರಿ ಹೊತ್ತಿನಲ್ಲಿ) ನಿದ್ದೆ ಆವರಿಸಲು ಮತ್ತು ಬೆಳಕು ಹರಿದಾಗ ಎಚ್ಚರಾಗಲು ನೆರವಾಗುತ್ತದೆ ಹಾಗೂ ಗಾಢ ನಿದ್ದೆಯ ಸಮಯದಲ್ಲಿ ಕನಸುಗಳು ಬೀಳಲೂ ಈ ಮೆಲಟೋನಿನ್ ಇರುವುದು ಅಗತ್ಯವಾಗಿದೆ.

# ಕ್ಯಾಲ್ಸಿಯಂ  :  ಮೆದುಳಿನಲ್ಲಿರುವ ನ್ಯೂರಾನ್ ಗಳ ಚಟುವಟಿಕೆಗೆ ಹಾಲಿನಲ್ಲಿರುವ ಕ್ಯಾಲ್ಸಿಯಂ ನಿಕಟ ಸಂಬಂಧ ಹೊಂದಿದೆ ಹಾಗೂ ಈ ಚಟುವಟಿಕೆಯೇ ನಿದ್ದೆಯ ಸಮಯದಲ್ಲಿ ಗಾಢನಿದ್ದೆ ಅಥವಾ ಕಣ್ಣುಗುಡ್ಡೆಗಳು ಕ್ಷಿಪ್ರವಾಗಿ ಚಲಿಸುವ (ಖಇಒ-ಖಚಿಟಿಜom ಇಥಿe movemeಟಿಣ) ಹಾಗೂ ಗಾಢವಲ್ಲದ ನಿದ್ದೆ (ಟಿoಟಿ-ಖಇಒ) ಯ ಅವಧಿಯನ್ನು ನಿರ್ಧರಿಸುತ್ತವೆ.

# ವಿಟಮಿನ್ B12  :  ಹಾಲಿನಲ್ಲಿರುವ ಇತರ ವಿಟಮಿನ್ನುಗಳಿಗಿಂತಲೂ ಈ ಪೋಷಕಾಂಶಕ್ಕೆ ಹೆಚ್ಚಿನ ಮಹತ್ವವೇಕಿದೆ ಗೊತ್ತೇ? ಮೆದುಳಿನಲ್ಲಿರುವ ಪಿನಿಯಲ್ ಗ್ರಂಥಿ ಮೆಲಟೋನಿನ್ ಅನ್ನು ಉತ್ಪಾದಿಸಿ ನಿಯಂತ್ರಿಸಲು ಈ ವಿಟಮಿನ್ ಅವಶ್ಯವಾಗಿದೆ. ಈ ಗುಣವನ್ನು ಕಂಡುಕೊಂಡ ಬಳಿಕ ಅಗತ್ಯ ಪ್ರಮಾಣದ ವಿಟಮಿನ್B12 ಹೊಂದಿರುವ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದ್ದು ಈ ಗುಳಿಗೆಗಳ ಸೇವನೆಯಿಂದ ನಿದ್ರಾರಾಹಿತ್ಯದ ತೊಂದರೆಯನ್ನು ನೀಗಿಸಲಾಗುತ್ತದೆ. ಅಗ್ಗದ ಹಾಲಿನಲ್ಲಿ ನೈಸರ್ಗಿಕವಾಗಿ ದೊರಕುವ ಈ ಅಮೂಲ್ಯ ವಿಟಮಿನ್ ಅನ್ನು ದುಬಾರಿ ಬೆಲೆ ತೆತ್ತು ಗುಳಿಗೆಗಳ ರೂಪದಲ್ಲಿ ಕೊಳ್ಳುವ ಅವಶ್ಯಕತೆ ಇದೆಯೇ?

# ತೂಕ ಹೆಚ್ಚಿಸಿಕೊಳ್ಳಬೇಕೇ? ರಾತ್ರಿ ಮಲಗುವ ಮುನ್ನ ಹಾಲು ಕುಡಿಯಿರಿ
ಕೃಶಶರೀರ ಹೊಂದಿರುವ ಮೂಲಕ ಪಡೆಯಬಹುದಾದ ಆರೋಗ್ಯಕರ ಪ್ರಯೋಜನಗಳನ್ನು ಪಟ್ಟಿಮಾಡಬಹುದಾದರೂ ಕೆಲವು ವ್ಯಕ್ತಿಗಳಿಗೆ ಕೆಲವೊಂದು ಆರೋಗ್ಯ ಸಂಬಂಧಿತ ಅಗತ್ಯತೆಗಾಗಿಯಾದರೂ ತೂಕ ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಎದುರಾಗುತ್ತದೆ. ದೇಹದಾರ್ಢ್ಯ ಪಟುಗಳು, ಅನಾರೋಗ್ಯದಿಂದ ಕಳೆದುಕೊಂಡ ತೂಕವನ್ನು ಮರುಪಡೆಯಲು, ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳಲು ಮೊದಲಾದ ಸಕಾರಣಗಳಿದ್ದರೆ ದೇಹದ ತೂಕ ಹೆಚ್ಚಿಸಿಕೊಳ್ಳಲು ಹಾಲು ಅಮೂಲ್ಯ ನೆರವು ನೀಡುತ್ತದೆ. ಸಾಮಾನ್ಯವಾಗಿ ನಮ್ಮ ದೇಹದ ಜೀವಕೋಶಗಳ ಬೆಳವಣಿಗೆ ರಾತ್ರಿ ಮಲಗಿದ್ದ ಸಮಯದಲ್ಲಿ ಹೆಚ್ಚಾಗಿ ಜರುಗುತ್ತದೆ. ಆದರೂ, ದೇಹದ ತೂಕದ ಏರಿಕೆಗೆ ಹಾಲಿನ ಸೇವನೆ ಒಂದು ಪೂರಕ ಅಂಶವೇ ಹೊರತು ಎಲ್ಲವೂ ಅಲ್ಲ, ದೇಹದ ತೂಕದ ಏರಿಕೆಗೆ ಇನ್ನೂ ಹಲವಾರು ಅಂಶಗಳು ಪ್ರಭಾವ ಬೀರುತ್ತವೆ.

# ಹಾಲಿನ ಸೇವನೆಯ ಇತರ ಪ್ರಯೋಜನಗಳು
ದೇಹದ ಬೆಳವಣಿಗೆಗೆ ಹಾಲು ಕುಡಿಯುವುದು ತುಂಬಾ ಅಗತ್ಯ. ಮಕ್ಕಳಿಗೆ ಹಾಲಿನ ಅಗತ್ಯತೆಯನ್ನು ಸೂಚಿಸಲು ಹಲವಾರು ಬಾಲಗೀತೆಗಳನ್ನೂ ರಚಿಸಲಾಗಿದೆ. ಚಿಕ್ಕಂದಿನಿಂದಲೂ ನಮ್ಮ ತಾಯಂದಿರು ಮತ್ತು ಅಜ್ಜಿಯಂದಿರು ಈ ವಿಷಯವನ್ನು ಸತತವಾಗಿ ಹೇಳುತ್ತಾ ಬಂದಿದ್ದಾರೆ. ಮಕ್ಕಳ ಸಹಿತ ಎಲ್ಲಾ ವಯೋಮಾನದವರು ನಿತ್ಯವೂ ಸೇವಿಸಬೇಕಾದ ಹಾಲು ಕ್ಯಾಲ್ಸಿಯಂ, ವಿಟಮಿನ್ ಎ, ಡಿ ಮೊದಲಾದ ಪೋಷಕಾಂಶಗಳಿಂದ ಸಮೃದ್ದವಾಗಿದ್ದು ವಿಶೇಷವಾಗಿ ಹಾಲಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳ ದೃಢತೆಗೆ ಅಗತ್ಯವಾಗಿದೆ. ಕ್ಯಾಲ್ಸಿಯಂ ಕೊರತೆಯಿಂದ ಮೂಳೆಗಳು ಶಿಥಿಲವಾಗುವ ಓಸ್ಟಿಯೋಪೋರೋಸಿಸ್ ಹಾಗೂ ಅಧಿಕ ರಕ್ತದೊತ್ತಡ ಮೊದಲಾದ ತೊಂದರೆಗಳು ಎದುರಾಗುತ್ತವೆ. ಹಾಲಿನ ಸೇವನೆಯಿಂದ ಈ ಕೊರತೆಯನ್ನು ನೀಗಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

# ಕುದಿಸಿದ ಹಾಲು ಅಥವಾ ಉಗುರುಬೆಚ್ಚನೆಯ ಹಾಲು ಯಾವುದು ಉತ್ತಮ
ಕೆಲವು ತಜ್ಞರ ಪ್ರಕಾರ ಹಾಲು ಕುಡಿದ ಬಳಿಕ ಆವರಿಸುವ ನಿದ್ದೆಗೆ ಹಾಲಿನಲ್ಲಿರುವ ಪೋಷಕಾಂಶಗಳು ನೇರವಾಗಿ ಕಾರಣವಲ್ಲ, ಬದಲಿಗೆ ಹಾಲಿನ ಬಿಸಿ ದೇಹದಲ್ಲಿ ಒಂದು ಬಗೆಯ ಮನೋವೈಜ್ಞಾನಿಕ ಪರಿಣಾಮವನ್ನುಂಟುಮಾಡುತ್ತದೆ. ರಾತ್ರಿ ಮಲಗುವ ಮುನ್ನ ಉಗುರುಬೆಚ್ಚನೆಯ ಹಾಲನ್ನು ಸೇವಿಸುವ ಮೂಲಕ ಹೊಟ್ಟೆಯಲ್ಲಿಯೂ ಬೆಚ್ಚನೆಯ ಅನುಭವವಾಗುವ ಮೂಲಕ ಸ್ನಾಯುಗಳನ್ನು ನಿರಾಳಗೊಳಿಸಲು ಹಾಗೂ ಒಟ್ಟಾರೆಯಾಗಿ ಹಿತವಾದ ಭಾವನೆಯನ್ನು ಪಡೆಯಲು ಸಾಧ್ಯವಾಗುತ್ತದೆ.

Facebook Comments