‘ಲಂಬೋದರ’ನ ಅವತಾರದಲ್ಲಿ ಈ ವಾರ ತೆರೆಮೇಲೆ ಲೂಸ್ ಮಾದ

ಈ ಸುದ್ದಿಯನ್ನು ಶೇರ್ ಮಾಡಿ

Lambodhara--01

ಬಹಳ ಗ್ಯಾಪ್ ನಂತರ ಮತ್ತೊಮ್ಮೆ ಲೂಸ್ ಮಾದ ಯೋಗಿ ಬೆಳ್ಳಿ ಪರದೆ ಮೇಲೆ ಮಿಂಚಲು ಸಿದ್ಧರಾಗುತ್ತಿದ್ದಾರೆ. ಲಂಬೋದರ ಎಂಬ ಈ ಚಿತ್ರದ ಮೂಲಕ ಯೋಗಿಗೆ ಮತ್ತೊಂದು ಇಮೇಜ್ ಸಿಗಲಿದೆಯಂತೆ. ಈ ಚಿತ್ರಕ್ಕೆ ಕೃಷ್ಣರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.  ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕರಾದ ರಾಘವೇಂದ್ರ ಭಟ್, ನಾಯಕ ನಟ ಯೋಗಿ, ನಿರ್ದೇಶಕ ಕೃಷ್ಣರಾಜ್ ಹಾಗೂ ನಾಯಕನ ತಾಯಿಯಾಗಿ ಕಾಣಿಸಿಕೊಂಡಿರುವ ಅರುಣಾ ಬಾಲರಾಜ್ ಹಾಜರಿದ್ದು ಚಿತ್ರದ ಕುರಿತಂತೆ ಹೇಳಿಕೊಂಡರು.

ಆರಂಭದಲ್ಲಿ ಕೃಷ್ಣರಾಜ್ ಮಾತನಾಡಿ, ಚಿತ್ರದ ಟ್ರೈಲರ್‍ಅನ್ನು ಇತ್ತೀಚೆಗಷ್ಟೆ ಬಿಡುಗಡೆ ಮಾಡಿದ್ದೆವು. ಒಳ್ಳೆ ರೆಸ್ಪಾನ್ಸ್ ಬಂದಿದೆ. ಸಿನಿಮಾದ ಪ್ರತಿ ಸೀನ್ ನೋಡಿಕೊಂಡು ಹೋಗುತ್ತದೆ. ಕಾಮಿಡಿ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಕೂಡ ಚಿತ್ರದಲ್ಲಿದೆ. ಕಥೆಗೆ ಪೂರಕವಾಗಿ ಕಾಮಿಡಿ ಮೂಡಿಬಂದಿದೆ.

ಲಂಬೋದರ ಹುಟ್ಟಿದಾಗಿನಿಂದ 28 ವರ್ಷದವರೆಗೆ ಕಥೆ ಟ್ರಾವೆಲ್ ಆಗುತ್ತದೆ. ಯೋಗಿ ಅವರ ಪಾತ್ರಕ್ಕೆ ಮೂರು ಗೆಟಪ್ ಇವೆ. ವಿತರಕ ಜಯಣ್ಣ ರಾಜ್ಯಾದ್ಯಂತ ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ ಎಂದು ಹೇಳಿದರು.

ನಂತರ ನಿರ್ಮಾಪಕ ರಾಘವೇಂದ್ರ ಭಟ್ ಮಾತನಾಡಿ, ಒಂದು ಒಳ್ಳೆ ಫ್ಯಾಮಿಲಿ ಸಬ್ಜೆಕ್ಟ್ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಜನರಿಗೆ ಖಂಡಿತ ಇಷ್ಟವಾಗುತ್ತದೆ ಎಂದು ಹೇಳಿದರು. ನಾಯಕ ನಟ ಯೋಗಿ ಮಾತನಾಡಿ, ಸಿದ್ಲಿಂಗು ಚಿತ್ರದ ಕಥೆ ಬೇರೆ, ಈ ಚಿತ್ರದ ಕಥೆಯೇ ಬೇರೆ. ವರ್ಷದ ನಂತರ ನನ್ನ ಸಿನಿಮಾ ಬಿಡುಗಡೆಯಾ ಗುತ್ತಿದೆ. ಚಿತ್ರದ ಬಗ್ಗೆ ತುಂಬಾ ನಂಬಿಕೆಯಿದೆ.

ಎರಡೂವರೆ ಗಂಟೆ ನಗುವಿನ ಜೊತೆಗೆ ಫ್ಯಾಮಿಲಿ ಎಂಟರ್‍ಟೈನರ್ ಕೂಡ ಚಿತ್ರದಲ್ಲಿದೆ. ನನ್ನ ಕೆರಿಯರ್‍ನಲ್ಲಿ ಇದು ಖಂಡಿತ ಕಮ್ ಬ್ಯಾಕ್ ಸಿನಿಮಾ ಆಗಲಿದೆ. ಬ್ಯಾಕ್‍ರೌಂಡ್ ಸ್ಕೋರ್ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಒಂದು ಮೊಟ್ಟೆಯ ಕಥೆ ಖ್ಯಾತಿಯ ಮಿಥುನ್ ಮುಕುಂದನ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ ಎಂದು ಹೇಳಿದರು. ಉಳಿದಂತೆ ನಾಯಕನ ಸ್ನೇಹಿತರಾಗಿ ಅಭಿನಯಿಸಿರುವ ಧರ್ಮಣ್ಣ ಹಾಗೂ ಸಿದ್ದು ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು.

ನಟಿ ಅರುಣಾ ಬಾಲರಾಜ್ ಮಾತನಾಡಿ, ತಾಯಿ-ಮಗನ ನಡುವಿನ ಕಥೆಯನ್ನು ನಿರ್ದೇಶಕರು ತುಂಬಾ ಚೆನ್ನಾಗೆ ತೆರೆ ಮೇಲೆ ಮೂಡಿಸಿದ್ದಾರೆ ಎಂದು ಹೇಳಿದರು. ಈ ಚಿತ್ರದಲ್ಲಿ ಅಕಾಂಕ್ಷ ನಾಯಕಿಯಾಗಿ ಅಭಿನಯಿಸಿದ್ದಾರೆ.

Facebook Comments