ಕೆಎಸ್‌ಆರ್‌ಟಿಸಿ ಬಸ್‍ನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ 699 ಬೆಳ್ಳಿ ದೀಪ ವಶ

ಈ ಸುದ್ದಿಯನ್ನು ಶೇರ್ ಮಾಡಿ

silver lampsಬೆಂಗಳೂರು,ಜ.11- ರಾಜ್ಯ ರಸ್ತೆ ಸಾರಿಗೆಯ ಬೆಂಗಳೂರು-ವಿಜಯವಾಡ ಮಾರ್ಗದ ಐರಾವತ ಕ್ಲಬ್ ಕ್ಲಾಸ್ ಬಸ್‍ನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ 15 ಲಕ್ಷ ರೂ. ಮೌಲ್ಯದ ಬೆಳ್ಳಿಯ ದೀಪಗಳನ್ನು ವಿಭಾಗೀಯ ನಿಯಂತ್ರಣಾಧಿಕಾರಿ ನೇತೃತ್ವದ ತಂಡ ವಶಪಡಿಸಿಕೊಂಡಿದೆ. ಈ ಸಂಬಂಧ ಬಸ್‍ನ ಚಾಲಕ ಮತ್ತು ನಿರ್ವಾಹಕರನ್ನು ಅಮಾನತುಗೊಳಿಸಲಾಗಿದೆ.

ಕೆಲವೊಂದು ಮಾರ್ಗಗಳಲ್ಲಿ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆ ಅನುಮಾನಸ್ಪದ ರೀತಿಯ ನಡುವಳಿಕೆ ಕಂಡುಬಂದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಕೆಎಸ್‌ಆರ್‌ಟಿಸಿ ಯಲ್ಲಿ ನಿರಂತರವಾಗಿ ಹಾಗೂ ಅನಿರೀಕ್ಷಿತವಾಗಿ ತಪಾಸಣಾ ಕಾರ್ಯವನ್ನು ಜಾರಿಗೊಳಿಸಲಾಗಿದೆ.

ಅದರಂತೆ ನಿನ್ನೆ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಭಾಕರ್ ರೆಡ್ಡಿ, ಭದ್ರತಾ ನಿರೀಕ್ಷಕರಾದ ರಮ್ಯ, ಸಂಚಾರ ನಿಯಂತ್ರಕ ಚಲಪತಿ ಅವರನ್ನೊಳಗೊಂಡ ಕೇಂದ್ರೀಯ ವಿಭಾಗದ ತಂಡವು ಹೊಸಕೋಟೆ ಟೋಲ್ ಬಳಿ ಈ ಬಸ್‍ನ್ನು ತಪಾಸಣೆಗೊಳಪಡಿಸಿತು.

ಈ ವೇಳೆ ಪ್ರಯಾಣಿಕರಿಗೆ ಟಿಕೆಟ್ ವಿತರಿಸಿದ್ದನ್ನು ಮೊದಲು ತಪಾಸಣೆ ಮಾಡಿ ನಂತರ ವಾಹನದ ಡಿಕ್ಕಿಯನ್ನು ಪರಿಶೀಲಿಸಿದಾಗ ನಾಲ್ಕು ಬ್ಯಾಗ್‍ಗಳಲ್ಲಿ 699 ಬೆಳ್ಳಿಯ ದೀಪಗಳು ಇರುವುದು ಕಂಡುಬಂದಿದ್ದು, ಇದರ ಮೌಲ್ಯ 15 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

ಈ ಮಾಹಿತಿಯನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು, ಕೂಡಲೇ ಅಧಿಕಾರಿಗಳು ಬೆಂಗಳೂರು ಕೇಂದ್ರೀಯ ವಿಭಾಗೀಯ ಕಚೇರಿಗೆ ತೆರಳಿ ಬೆಳ್ಳಿ ದೀಪಗಳನ್ನು ಮಹಜರು ಮಾಡಿ ಇಂದು ಬೆಳಗಿನ ಜಾವ 2 ಗಂಟೆ ಸಮಯದಲ್ಲಿ ತೆರಿಗೆ ಇಲಾಖೆಗೆ ಒಪ್ಪಿಸಿದ್ದಾರೆ. ಈ ಬಸ್‍ನ ಚಾಲಕ ಹಾಗೂ ನಿರ್ವಾಹಕನನ್ನು ಅಮಾನತುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ಎಲ್ಲ ವಿಭಾಗಗಳಲ್ಲೂ ಇದೇ ರೀತಿ ತಪಾಸಣೆ ಕಾರ್ಯವನ್ನು ಹೆಚ್ಚಿಸಲು ಸೂಚಿಸಲಾಗಿದೆ.

Facebook Comments