ಛತ್ತೀಸ್‍ಗಢ ಸರ್ಕಾರದಿಂದಲೂ ಸಿಬಿಐ ತನಿಖೆ ಸಮ್ಮತಿ ಹಿಂತೆಗೆತ

ಈ ಸುದ್ದಿಯನ್ನು ಶೇರ್ ಮಾಡಿ

cbiರಾಜ್ಪುರ್, ಜ.11- ರಾಜ್ಯದಲ್ಲಿನ ಪ್ರಕರಣಗಳ ತನಿಖೆಗೆ ಸಿಬಿಐಗೆ ನೀಡಲಾಗಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂತೆಗೆದುಕೊಳ್ಳಲು ಇದೀಗ ಕಾಂಗ್ರೆಸ್ ನೇತೃತ್ವದ ಛತ್ತೀಸ್‍ಗಢ ಸರ್ಕಾರ ಕೂಡ ನಿರ್ಧರಿಸಿದೆ.

ಇದಕ್ಕೂ ಮುನ್ನ ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಈ ನಿರ್ಧಾರ ಕೈಗೊಂಡು ಒಪ್ಪಿಗೆಯನ್ನು ಹಿಂತೆಗೆದುಕೊಂಡಿದ್ದವು. ಸಿಬಿಐ ಮುಖ್ಯಸ್ಥರಾಗಿ ಅಲೋಕ್ ವರ್ಮಾ ಅವರನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಮಿತಿ ವಜಾಗೊಳಿಸಿ ಅಗ್ನಿಶಾಮಕ, ನಾಗರಿಕ ರಕ್ಷಣೆ ಮತ್ತು ಗೃಹ ಕಾರ್ಯಪಡೆ ಇಲಾಖೆಯ ಮಹಾ ನಿರ್ದೇಶಕರಾಗಿ ನಿನ್ನೆ ನೇಮಿಸಿದ ನಂತರ ಛತ್ತೀಸ್‍ಗಢ ಸರ್ಕಾರ ಈ ಕ್ರಮ ಕೈಗೊಂಡಿದೆ.

ಛತ್ತೀಸ್‍ಗಢ ಮುಖ್ಯಮಂತ್ರಿ ಭೂಪೇಶ್ ಬಗ್ಹೆಲ್ ಈ ಕುರಿತು ಕೇಂದ್ರ ಗೃಹ ಸಚಿವಾಲಯ ಹಾಗೂ ಆಂತರಿಕ ಸಚಿವಾಲಯಕ್ಕೆ ಪತ್ರ ಬರೆದಿದ್ದು, ರಾಜ್ಯದಲ್ಲಿ ಯಾವುದೇ ಹೊಸ ಕೇಸುಗಳನ್ನು ದಾಖಲಿಸದಂತೆ ನಿರ್ದೇಶಿಸಬೇಕೆಂದು ಕೋರಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಕಾರ್ಯಾಲಯ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಸರ್ಕಾರದ ಈ ನಿರ್ಧಾರದಿಂದಾಗಿ ಇನ್ನು ಮುಂದೆ ಸಿಬಿಐ, ರಾಜ್ಯದಲ್ಲಿ ತನಿಖೆ ಮತ್ತು ದಾಳಿ ನಡೆಸುವುದಿದ್ದರೆ ಮೊದಲು ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕು. 2001ರಲ್ಲಿ ಛತ್ತೀಸ್‍ಗಢ ಸರ್ಕಾರ ಸಿಬಿಐ ದಾಳಿ ಮತ್ತು ತನಿಖೆಗೆ ಸಾಮಾನ್ಯ ಒಪ್ಪಿಗೆ ನೀಡಿತ್ತು.

ಪಶ್ಚಿಮ ಬಂಗಾಳ ಮತ್ತು ಆಂಧ್ರ ಪ್ರದೇಶ ಸರ್ಕಾರಗಳು ಕಳೆದ ವರ್ಷ ಸಿಬಿಐಗೆ ನೀಡಿದ್ದ ಒಪ್ಪಿಗೆಯನ್ನು ಹಿಂಪಡೆದಿದ್ದವು. ಒಪ್ಪಿಗೆ ಹಿಂಪಡೆಯುವಿಕೆಯಿಂದ ಈಗಾಗಲೇ ಮಾಡುತ್ತಿರುವ ತನಿಖೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಆಂತರಿಕ ಸಚಿವಾಲಯ ಅಧಿಕಾರಿಗಳು ತಿಳಿಸಿದ್ದಾರೆ.

Facebook Comments