ವಿಧಾನಸೌಧದ ಬಳಿ 25 ಲಕ್ಷ ಹಣ ಪತ್ತೆ ಪ್ರಕರಣ ಕುರಿತು ಸಿಎಂ ಹೇಳಿದ್ದನು..?

ಈ ಸುದ್ದಿಯನ್ನು ಶೇರ್ ಮಾಡಿ

CM-Kumaraswamy-Puttaragashe

ಬೆಂಗಳೂರು, ಜ.11-ವಿಧಾನಸೌಧದ ಬಳಿ ದೊರೆತ ಹಣದ ವಿಚಾರದಲ್ಲಿ ಕಾನೂನು ಬದ್ಧ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಮಾಜಿ ಪ್ರಧಾನಿ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರೀಯವರ 53ನೇ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ವಿಧಾನಸೌಧದ ಬಳಿ ಪತ್ತೆಯಾದ ಹಣದ ಬಗ್ಗೆ ಗಮನಸೆಳೆದಾಗ ಮುಖ್ಯಮಂತ್ರಿಗಳು, ಸಮಯಾವಕಾಶ ಕೊಡಿ. ಕಾನೂನು ಬದ್ಧವಾಗಿ ತೀರ್ಮಾನ ಕೈಗೊಳ್ಳುತ್ತೇವೆ. ತಪ್ಪನ್ನು ಮುಚ್ಚಿ ಹಾಕುವುದಿಲ್ಲ. ಯಾರಿಗೂ ಕೂಡ ರಕ್ಷಣೆ ಕೊಡಲು ತಮ್ಮ ರಾಜಕೀಯ ಜೀವನದಲ್ಲಿ ಕೈ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಅವರು ನ್ಯಾಯಾಲಯದ ಮೊರೆ ಹೋಗಿರುವುದು ಅವರ ವೈಯಕ್ತಿಕ ವಿಚಾರ. ಭವಿಷ್ಯದ ದೃಷ್ಟಿಯಿಂದ ಸಂವಿಧಾನ ಹಾಗೂ ಕಾನೂನು ಚೌಕಟ್ಟಿನಲ್ಲಿ ಅವರು ಹೋಗಿರಬಹುದು. ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರ ಹಾಗೂ ನಟ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಬೇಕೆಂದು ಅಭಿಮಾನಿಗಳು ಬಯಸಿದ್ದಾರೆ. ಅದರ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಆನಂತರ ನೋಡೋಣ ಎಂದರು.

ಸರ್ಕಾರಿ ಭೂಮಿಯನ್ನು ಸ್ವೇಚ್ಛಾಚಾರವಾಗಿ ಕೊಡಲು ಅವಕಾಶ ನೀಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕೆಲವು ನಿಗಮ ಮಂಡಳಿಗಳ ನೇಮಕ ತಾಂತ್ರಿಕ ಸಮಸ್ಯೆಯಿಂದಾಗಿ ವಿಳಂಬವಾಗಿದೆ. ಈ ವಿಚಾರದಲ್ಲಿ ಹೊರಗಡೆ ಚರ್ಚೆ ಮಾಡುವುದು ಶೋಭೆ ತರುವುದಿಲ್ಲ ಎಂದು ತಿಳಿಸಿದರು.

ಮಲೆನಾಡು ಭಾಗದಲ್ಲಿ ಮಂಗನಕಾಯಿಲೆ ತಡೆಗಟ್ಟಲು ಅಗತ್ಯ ಕ್ರಮಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಯಾರೂ ಕಾಯಿಲೆ ಬಗ್ಗೆ ಗಾಬರಿಯಾಗುವುದು ಬೇಡ. ಈಗಾಗಲೇ ಅಧಿಕಾರಿಗಳು ಎರಡು ಬಾರಿ ರೋಗ ಹರಡದಂತೆ ಕ್ರಮಕೈಗೊಂಡಿದ್ದಾರೆ, ಅಲ್ಲದೆ ಸ್ಥಳದಲ್ಲಿದ್ದು, ನಿಗಾ ವಹಿಸಿದ್ದಾರೆ.

ರೋಗಿಗಳಿಗೆ ಎಲ್ಲಾ ರೀತಿಯ ಚಿಕಿತ್ಸೆ ನೀಡಲು ಸೂಚಿಸಲಾಗಿದೆ ಎಂದರು. ಮಾಜಿ ಪ್ರಧಾನಿ ದಿವಂಗತ ಲಾಲ್‍ಬಹದ್ದೂರ್ ಶಾಸ್ತ್ರೀ ಅವರು ಪ್ರತಿಯೊಬ್ಬ ರಾಜಕಾರಣಿಗೂ ಮಾರ್ಗದರ್ಶಕರಾಗಿದ್ದಾರೆ. ಅವರ ಆದರ್ಶಗಳನ್ನು ಬದುಕಿನಲ್ಲಿ ರೂಢಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸಬೇಕಾಗಿದೆ.

ದೇಶವನ್ನು ಕಾಯುವ ಸೈನಿಕರಿಗೆ ಜೈ ಜವಾನ್ ಹಾಗೂ ದೇಶಕ್ಕೆ ಅನ್ನ ನೀಡುವ ಅನ್ನದಾತರಿಗೆ ಜೈ ಕಿಸಾನ್ ಎಂಬ ಮಂತ್ರ ಘೋಷವನ್ನು ನೀಡಿದ್ದು, ಇನ್ನೂ ನೆನಪಿನಿಂದ ಮಾಸಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಉಪಸ್ಥಿತರಿದ್ದರು.

Facebook Comments

Sri Raghav

Admin