ಜನಪ್ರಿಯತೆಗಾಗಿ ಬಿಜೆಪಿ ‘ಮೇಲ್ಜಾತಿ ಮೀಸಲಾತಿ’ ರಾಜಕೀಯ ಮಾಡುತ್ತಿದೆ : ದೇವೇಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

Devegowda-02

ಹಾಸನ, ಜ.11- ದೇಶದಲ್ಲಿ ಜನಪ್ರಿಯತೆ ಕಳೆದುಕೊಂಡಿರುವ ಕೇಂದ್ರದ ಬಿಜೆಪಿ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜಾತಿಯವರಿಗೆ ಮೀಸಲಾತಿ ಅಸ್ತ್ರವನ್ನು ಚುನಾವಣೆಯ ದಾಳವನ್ನಾಗಿ ಬಳಸಿಕೊಳ್ಳಲು ಮುಂದಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದರು.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಕೇಂದ್ರದ ಜನಪ್ರಿಯತೆ ಕುಗ್ಗುತ್ತಿದೆ. ಅದಕ್ಕಾಗಿ ಮೀಸಲಾತಿ ಅಸ್ತ್ರ ಬಳಸಿದ್ದಾರೆ. ಇದೇ ಕಾರಣಕ್ಕೆ ಮರು ಮಾತನಾಡದೆ ಎಲ್ಲ ಪಕ್ಷಗಳವರೂ ಬೆಂಬಲ ನೀಡಿದ್ದಾರೆ.

ಈ ವಿಷಯ ಸುಪ್ರೀಂಕೊರ್ಟ್‍ಗೆ ಹೋಗಿದೆ. ಅಲ್ಲಿ ಏನಾಗುತ್ತದೆಯೋ ನೋಡೋಣ ಎಂದರು. ನಾವು ಬ್ರಾಹ್ಮಣ ಸಮುದಾಯಕ್ಕೆ ಏನು ಕೊಡಬೇಕೋ ಅದನ್ನು ಕೊಟ್ಟಿದ್ದೇವೆ. ಈ ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಯಾವ ಪ್ರಧಾನಿ ಅಥವಾ ಸಿಎಂ ಬಗೆಹರಿಸಲು ಆಗುವುದಿಲ್ಲ ಎಂದರು.

ನಮ್ಮದು ರೈತಾಪಿ ವರ್ಗಗಳಿರುವ ದೇಶ. ಎಲ್ಲರಿಗೂ ಸರ್ಕಾರಿ ನೌಕರರು ನೀಡಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಖಾಸಗಿ ಹಾಗೂ ಕೃಷಿ ರಂಗದಲ್ಲಿ ಕೆಲಸ ಮಾಡುತ್ತಿರುವ ಬೇಕಾದಷ್ಟು ನೌಕರರಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನೊಂದಿಗೆ ಮೈತ್ರಿ ಮುಂದುವರಿಕೆಯಾದರೆ ನಮಗೆ ಅವರು ಎಷ್ಟು ಸೀಟು ಕೊಡುತ್ತಾರೋ ಗೊತ್ತಿಲ್ಲ. ಈ ಬಗ್ಗೆ ರಾಹುಲ್ ಗಾಂಧಿ, ವೇಣುಗೋಪಾಲ್, ಸಿದ್ದರಾಮಯ್ಯನವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ.

ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ ಎಂದು ಹೇಳುವ ಮೂಲಕ ತಾವು ಸ್ಪರ್ಧಿಸುವ ಕುತೂಹಲವನ್ನು ಮಾಜಿ ಪ್ರಧಾನಿ ಕಾಯ್ದಿಟ್ಟರು.

ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ವಜಾ ವಿಚಾರಕ್ಕೆ ಸಂಬಂಧಿಸಿದಂತೆ ಪರಸ್ಪರ ಆಪಾದನೆ ನಂತರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಇದು ಕೇವಲ ತಾಂತ್ರಿಕ ವಿಚಾರ ಅಷ್ಟೆ. ಸಿಬಿಐ ಸೇರಿ ಅನೇಕ ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ ಹೊಸದೇನಲ್ಲ. ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ ಎಂದು ವಿಷಾದಿಸಿದರು.

ಸಿಬಿಐ ಮುಖ್ಯಸ್ಥರನ್ನು ನೇಮಕ ಮಾಡಲು ಒಂದು ಸಮಿತಿ ಇರುತ್ತದೆ. ವರ್ಮಾ ಅವರಿಗೆ ರಜೆ ಮೇಲೆ ತೆರಳಲು ಆದೇಶಿಸಿದ್ದರಿಂದ ಕೋರ್ಟ್ ಇದನ್ನು ತಪ್ಪು ಎಂದು ಹೇಳಿತ್ತು. ಇದರಲ್ಲಿ ಆಯ್ಕೆ ಸಮಿತಿಯ ತೀರ್ಮಾನ ಅಂತಿಮವಾಗಿದೆ.

Facebook Comments

Sri Raghav

Admin