ಲಕ್ಷಾಂತರ ರೂ. ಕಾಪರ್ ವಸ್ತು ಕಳವು, ಅಧಿಕಾರಿ ಮೇಲೆ ದೂರು

ಈ ಸುದ್ದಿಯನ್ನು ಶೇರ್ ಮಾಡಿ

Electricityಶಿವಮೊಗ್ಗ, ಜ. 11-ನಗರದಲ್ಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕ.ವಿ.ಪ್ರ.ನಿ.ನಿ.) ದ ಉಗ್ರಾಣದಲ್ಲಿ ಲಕ್ಷಾಂತರ ರೂ. ಮೌಲ್ಯದ ಕಾಪರ್ ಬಸ್ ಬಾರ್ ಕಳವು ನಡೆದಿದೆ. ಈ ಸಂಬಂಧ ಉಗ್ರಾಣದ ಅಧಿಕಾರಿ, ಕಾವಲುಗಾರ ಹಾಗೂ ಸೆಕ್ಯುರಿಟಿ ಸರ್ವಿಸ್ ಸಂಸ್ಥೆಯ ಮೇಲೆ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಘಟನೆ ನಡೆದಿದೆ.

ಕ.ವಿ.ಪ್ರ.ನಿ.ನಿ. ದ ಸಹಾಯಕ ಉಗ್ರಾಣ ಪಾಲಕರಾದ ಕೆ.ಪಿ.ಮಂಜುನಾಥನಾಯ್ಕ್, ಶಿರಸಿಯ ಶಿವಶಕ್ತಿ ಸೆಕ್ಯೂರಿಟಿ ಸರ್ವಿಸ್ ಹಾಗೂ ಅದರ ಕಾವಲುಗಾರ ಪುಟ್ಟಸ್ವಾಮಿ ಎಂಬುವರ ವಿರುದ್ದ ನಿಯಮಿತದ ಹಿರಿಯ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಗ್ರಾಮಾಂತರ ಠಾಣೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.

ಘಟನೆ ಹಿನ್ನೆಲೆ: ಜ. 7 ರಂದು ಮುಂಜಾನೆ ಮೂರು ಜನ ಮುಸುಕುಧಾರಿಗಳು ಉಗ್ರಾಣಕ್ಕೆ ಆಗಮಿಸಿ, ತನಗೆ ಚಾಕುವಿನಿಂದ ಬೆದರಿಕೆ ಹಾಕಿ ಉಗ್ರಾಣದ ಒಳಗೆ ತೆರಳಿದ್ದರು. ಸುಮಾರು 20 ನಿಮಿಷವಿದ್ದರು. ನಂತರ ಹೊರಬಂದು ನನ್ನ ತಲೆಗೆ ಹೊಡೆದು, ಉಗ್ರಾಣದೊಳಗಿನಿಂದ ಏನನ್ನೂ ತೆಗೆದುಕೊಂಡು ಹೋಗಿಲ್ಲ ಎಂದು ಹೇಳಿ ಹೋದರು’ ಎಂದು ಕಾವಲುಗಾರ ಪುಟ್ಟಸ್ವಾಮಿ ನಿಗಮದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ.

ಉಗ್ರಾಣದೊಳಗೆ ಹೊತ್ತಿದ್ದ ಬೆಂಕಿಯನ್ನು ನಂದಿಸಲಾಗಿತ್ತು. ಉಗ್ರಾಣದ ಪಾಲಕ ಕೆ.ಪಿ.ಮಂಜುನಾಥನಾಯ್ಕ್ ಸ್ಥಳಕ್ಕಾಗಮಿಸಿರಲಿಲ್ಲ. ನಂತರ ಉಗ್ರಾಣದೊಳಗಿದ್ದ ರದ್ದಿ ಕಾಪರ್ ಬಸ್ ಬಾರ್ ಸಾಮಗ್ರಿಯ ತೂಕ ನಡೆಸಲಾಗಿತ್ತು. ಲೆಡ್ಜರ್ ಬುಕ್‍ನಲ್ಲಿ 929 ಕೆ.ಜಿ.ಯಿರುವ ಮಾಹಿತಿಯಿದ್ದು, ಉಗ್ರಾಣದಲ್ಲಿ 459 ಕೆ.ಜಿ.ಯಿರುವುದು ಕಂಡುಬಂದಿತ್ತು. ಕೆ.ಜಿ.ಗೆ ರದ್ದಿ ಕಾಪರ್ ಬಸ್ ಬಾರ್‍ಗೆ 465 ರೂ.ಗಳಿದ್ದು 2,12,435 ರೂ. ಮೌಲ್ಯದ ಕಾಪರ್ ಕಳುವಾಗಿರುವುದು ಬೆಳಕಿಗೆ ಬಂದಿತ್ತು.

ಮತ್ತೊಂದೆಡೆ ಉಗ್ರಾಣದ ಬಾಗಿಲ ಬೀಗ ಹೊಡೆಯದಿರುವುದು ಹಾಗೂ ಅಷ್ಟೊಂದು ತೂಕದ ಕಾಪರ್‍ನ್ನು ಯಾವುದೇ ವಾಹನದ ಸಹಾಯವಿಲ್ಲದೆ ಕಳ್ಳರು ತೆಗೆದುಕೊಂಡು ಹೋಗಿದ್ದಾರೆ ಎಂದು ನಂಬುವುದು ಅನುಮಾನವಾಗಿದೆ. ಈ ಕಾರಣದಿಂದ ಉಗ್ರಾಣದ ಸಹಾಯಕ ಉಗ್ರಾಣ ಪಾಲಕ, ಕಾವಲುಗಾರ ಹಾಗೂ ಕಾವಲುಗಾರ ನಿಯೋಜಿಸಿದ ಸಂಸ್ಥೆಯ ವಿರುದ್ದ ನಿಗಮದ ಅಧಿಕಾರಿಗಳು ದೂರು ನೀಡಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೆ ಸತ್ಯಾಂಶ ತಿಳಿದುಬರಬೇಕಾಗಿದೆ.

Facebook Comments