ಅಕ್ರಮವಾಗಿ ಸಂಗ್ರಹಿಸಿದ್ದ 8000 ಮೆಟ್ರಿಕ್ ಟನ್ ಮರಳು ವಶ

ಈ ಸುದ್ದಿಯನ್ನು ಶೇರ್ ಮಾಡಿ

hasanaಹಾಸನ, ಜ.11- ಸೂಕ್ತ ದಾಖಲೆ ಹಾಗೂ ರಾಯಲ್ಟಿಯನ್ನು ಪಾವತಿಸದೆ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 8000 ಮೆಟ್ರಿಕ್ ಟನ್ ಮರಳನ್ನು ಹಾಗೂ ವಾಹನ ಮತ್ತು ಜನರೇಟರ್ ಸೆಟ್‍ಅನ್ನು ಸಕಲೇಶಪುರ ತಾಲ್ಲೂಕಿನ ಅರೆಕೆರೆ ಬಳಿ ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿ ಮೇರೆಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಉಪವಿಭಾಗಾಧಿಕಾರಿ, ತಹಶೀಲ್ದಾರ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಮರಳು ವಶಪಡಿಸಿಕೊಂಡು ಕಾನೂನು ರೀತಿ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದಾರೆ.

ಓಷನ್ ಎಂಬ ಖಾಸಗಿ ಗುತ್ತಿಗೆದಾರ ಸಂಸ್ಥೆಯವರು ಅಕ್ರಮವಾಗಿ ಈ ದಾಸ್ತಾನು ಮಾಡಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಸ್ಥಳದಲ್ಲಿ ಹಾಜರಿದ್ದ ಕಂಪನಿಯ ಸೈಟ್ ಇಂಜಿನಿಯರ್ ಜಹೀರ್ ಉದ್ತಾನ್ ಅವರು ಮರಳು ದಾಸ್ತಾನಿಗೆ ಸೂಕ್ತ ದಾಖಲೆ ಒದಗಿಸುವಲ್ಲಿ ವಿಫಲರಾಗಿದ್ದಾರೆ.

ಯಾವುದೇ ಪರವಾನಗಿ ಇಲ್ಲದೆ ಸ್ಥಳೀಯವಾಗಿ ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದು ಕಂಡು ಬರುತ್ತಿದ್ದು, ಸರ್ಕಾರಕ್ಕೆ ತೆರಿಗೆಯನ್ನು ವಂಚಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಕಾನೂನು ರೀತಿಯಲ್ಲಿ ಮೊಕದ್ದಮೆ ದಾಖಲಿಸಿ ಕಠಿಣ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಯವರು ಸಕಲೇಶಪುರ ಉಪವಿಭಾಗಾಧಿಕಾರಿಗೆ ಸೂಚಿಸಿದ್ದಾರೆ.

ಓಷನ್ ಕಂಪನಿ ವಿರುದ್ದ ಎಫ್.ಐ.ಆರ್ ದಾಖಲಿಸಿ 8000 ಮೆಟ್ರಿಕ್ ಟನ್ ಮರಳು ಹಾಗೂ ಇಟಾಚಿ ವಾಹನವನ್ನು ವಶಕ್ಕೆ ತೆಗೆದುಕೊಂಡು ರಾಯಲ್ಟಿ ಮೇಲೆ ಐದು ಪಟ್ಟು ದಂಡ ವಿಧಿಸುವಂತೆ ನಿರ್ದೇಶನ ನೀಡಿದ್ದಾರೆ. ಉಪವಿಭಾಗಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ತಹಶೀಲ್ದಾರ್ ನಾಗಭೂಷನ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಶ್ರೀನಿವಾಸ್, ಎತ್ತಿನ ಹೊಳೆ ಯೋಜನೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ತಿಮ್ಮೇಗೌಡ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

Facebook Comments