ನಾಳೆ ಅಧಿಕೃತವಾಗಿ ಘೋಷಣೆಯಾಗಲಿದೆ ಎಸ್‍ಪಿ-ಬಿಎಸ್‍ಪಿ ಮೈತ್ರಿ

ಈ ಸುದ್ದಿಯನ್ನು ಶೇರ್ ಮಾಡಿ

sp-bspಲಕ್ನೋ, ಜ.11- ಮುಂಬರುವ ಲೋಕಸಭೆ ಚುನಾವಣೆಗಾಗಿ ರಾಜಕೀಯ ಚಟುವಟಿಕೆಗಳು ಬಿರುಸಾಗಿವೆ. ಉತ್ತರಪ್ರದೇಶದಲ್ಲಿ ಬಿಜೆಪಿ ಪ್ರಾಬಲ್ಯ ತಪ್ಪಿಸಲು ಸಮಾಜವಾದಿ ಪಕ್ಷ (ಎಸ್‍ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ಮೈತ್ರಿಗೆ ಸಜ್ಜಾಗಿವೆ. ಈ ಬಗ್ಗೆ ನಾಳೆ ಎರಡೂ ಪಕ್ಷಗಳು ಅಧಿಕೃತವಾಗಿ ಘೋಷಣೆ ಮಾಡಲಿವೆ.  ಎಸ್‍ಪಿ ಮುಖಂಡ ಅಖಿಲೇಶ್ ಯಾದವ್ ಮತ್ತು ಬಿಎಸ್‍ಪಿ ಅಧಿನಾಯಕಿ ಮಾಯಾವತಿ ನಾಳೆ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದು, ಮೈತ್ರಿ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಲಿದ್ದಾರೆ.

ಎಸ್‍ಪಿ ರಾಷ್ಟ್ರೀಯ ಕಾರ್ಯದರ್ಶಿ ರಾಜೇಂದ್ರ ಚೌಧರಿ ಮತ್ತು ಬಿಎಸ್‍ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಸಿ.ಮಿಶ್ರಾ ಇಂದು ಈ ವಿಷಯ ತಿಳಿಸಿದ್ದಾರೆ.
ಲಕ್ನೋದಲ್ಲಿ ನಾಳೆ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಎರಡು ಪಕ್ಷಗಳ ನಡುವಣ ಮೈತ್ರಿ, ಸ್ಥಾನ ಹಂಚಿಕೆ ಮತ್ತು ಇತರ ಪ್ರಾದೇಶಿಕ ಪಕ್ಷಗಳ ಬೆಂಬಲ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಚೌಧರಿ ಮತ್ತು ಮಿಶ್ರಾ ಹೇಳಿದ್ದಾರೆ. ಕಾಂಗ್ರೆಸ್‍ನನ್ನು ಈ ಮೈತ್ರಿಕೂಟದಿಂದ ದೂರವಿಡಲು ನಿರ್ಧರಿಸಿರುವ ಉಭಯ ಪಕ್ಷಗಳು ಕೆಲವು ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳಿಗೆ ಮಣೆ ಹಾಕಿವೆ.

ಅಖಿಲೇಶ್ ಮತ್ತು ಮಾಯಾವತಿ ಇತ್ತೀಚೆಗೆ ರಾಜಧಾನಿ ದೆಹಲಿಯಲ್ಲಿ ಕಳೆದ ವಾರ ಈ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಿದ್ದರು. ಉತ್ತರಪ್ರದೇಶದಲ್ಲಿ ಬಿಜೆಪಿಯನ್ನು ಮಣಿಸಲು ಎರಡು ಪಕ್ಷಗಳು ಒಗ್ಗೂಡುವ ವ್ಯಾಪಕ ಚರ್ಚೆ ನಡೆದಿತ್ತು. 80 ಸದಸ್ಯ ಬಲದ ಉತ್ತರ ಪ್ರದೇಶ ಲೋಕಸಭಾ ಸ್ಥಾನಗಳಲ್ಲಿ ಎಸ್‍ಪಿ ಮತ್ತು ಬಿಎಸ್‍ಪಿ ತಲಾ 35 ಸ್ಥಾನಗಳಲ್ಲಿ ಸ್ಪರ್ಧಿಸುವ ಸೀಟು ಹಂಚಿಕೆಗೆ ಸಮ್ಮತಿ ಸೂಚಿಸುವ ಸಾಧ್ಯತೆ ಇದೆ.

ಉಳಿದ 10 ಸ್ಥಾನಗಳನ್ನು ತಮ್ಮ ಮೈತ್ರಿಕೂಟದ ಪ್ರಾದೇಶಿಕ ಪಕ್ಷಗಳಿಗೆ ನೀಡುವ ನಿರೀಕ್ಷೆ ಇದೆ. ಈ ಮೈತ್ರಿಯಲ್ಲಿ ಕಾಂಗ್ರೆಸ್‍ನನ್ನು ದೂರವಿಟ್ಟಿರುವ ಎರಡೂ ಪಕ್ಷಗಳು, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಪ್ರತಿನಿಧಿಸಿರುವ ರಾಯ್‍ಬರೇಲಿ ಮತ್ತು ಅಮೇಥಿ ಲೋಕಸಭಾ ಕ್ಷೇತ್ರಗಳಲ್ಲಿ ತಮ್ಮ ಪಕ್ಷಗಳು ಯಾವುದೇ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದಿರುವ ಬಗ್ಗೆಯೂ ನಾಳೆ ಹೇಳಿಕೆ ಹೊರಬೀಳಲಿದೆ.

ಉತ್ತರ ಪ್ರದೇಶದ ಬದ್ಧ ರಾಜಕೀಯ ವೈರಿಗಳೆಂದೇ ಗುರುತಿಸಿಕೊಂಡಿದ್ದ ಎಸ್‍ಪಿ ಮತ್ತು ಬಿಎಸ್‍ಪಿ ಈಗ ದೋಸ್ತಿಯಾಗಿರುವುದು ರಾಜಕಾರಣದಲ್ಲಿ ಯಾರೂ ಮಿತ್ರರಲ್ಲ, ಯಾರೂ ಶತ್ರುಗಳಲ್ಲ ಎಂಬ ಮಾತನ್ನು ಸಾಬೀತು ಮಾಡಿದೆ.

Facebook Comments