ಭ್ರಷ್ಟಾಚಾರ ವಿವಾದದಿಂದ ಬೇಸತ್ತು ಅಲೋಕ್ ವರ್ಮಾ ರಾಜೀನಾಮೆ..!

ಈ ಸುದ್ದಿಯನ್ನು ಶೇರ್ ಮಾಡಿ

Alok-Verma--01
ನವದೆಹಲಿ, ಜ. 11: ಭ್ರಷ್ಟಾಚಾರ ಆರೋಪದ ಎದುರಿಸುತ್ತಿದ್ದ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೇಂದ್ರ ತನಿಖಾ ದಳದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅಲೋಕ್ ವರ್ಮಾ ಅವರನ್ನು ಕೇಂದ್ರ ಸರ್ಕಾರ ಕಡ್ಡಾಯ ರಜೆಯ ಮೇಲೆ ಕಳಿಸಿತ್ತು. ಕೇಂದ್ರ ಸರ್ಕಾರದ ಈ ನಿರ್ಣಯವನ್ನು ಪ್ರಶ್ನಿಸಿ ಅಲೋಕ್ ವರ್ಮಾ ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು.

ಜ.8 ರಂದು ಈ ಪ್ರಕರಣದ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಸಿಬಿಐ ನಿರ್ದೇಶಕರನ್ನು ಕಡ್ಡಾಯ ರಜೆಯ ಮೇಲೆ ಕಳಿಸಿದ ಕೇಂದ್ರದ ನಿರ್ಣಯವನ್ನು ತಪ್ಪು ಎಂದಿತ್ತು. ಮತ್ತು ಅಲೋಕ್ ವರ್ಮಾ ಅವರನ್ನೇ ಸಿಬಿಐ ನಿರ್ದೇಶಕರನ್ನಾಗಿ ಮುಂದುವರಿಯುವಂತೆ ಆದೇಶಿಸಿತ್ತು.

ಅವರು ಮತ್ತೆ ಸಿಬಿಐ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಮರುದಿನವೇ ಆಯ್ಕೆ ಸಮಿತಿ ಅವರನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಿತ್ತು. ಇದರಿಂದ ಬೇಸರಗೊಂಡ ಅಲೋಕ್ ವರ್ಮಾ ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

# ರಾಜೀನಾಮೆಗೂ ಮುನ್ನ ವರ್ಮಾ ಹೇಳಿದ್ದೇನು..?
ದೇಶದ ಅಗ್ರಮಾನ್ಯ ತನಿಖಾ ಸಂಸ್ಥೆ-ಸಿಬಿಐಗೆ ಬಾಹ್ಯ ಒತ್ತಡ ಎಂದಿಗೂ ಅಪಾಯಕಾರಿ ಎಂದು ನಿರ್ಗಮಿತ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ಬೇಸರದಿಂದ ನುಡಿದಿದ್ದಾರೆ. ಕೇಂದ್ರ ಸರ್ಕಾರ ಮತ್ತು ಸಿಬಿಐ ಸಂಸ್ಥೆಯ ನಡುವಿನ ಮುಸುಕಿನ ಗುದ್ದಾಟ ತೀವ್ರಗೊಂಡು ಇದೇ ಮೊದಲ ಬಾರಿಗೆ ವಿವಾದ ಸಂಬಂಧ ನಿರ್ಗಮಿತ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ಮೌನ ಮುರಿದಿದ್ದಾರೆ.

ಕೋರ್ಟ್ ಆದೇಶದ ಬಳಿಕ ಸಿಬಿಐಗೆ ವಾಪಸಾಗಿದ್ದ ಅಲೋಕ್ ವರ್ಮಾ ಅವರನ್ನು ಕೇಂದ್ರ ಸರ್ಕಾರ ಅಗ್ನಿಶಾಮಕ ದಳಕ್ಕೆ ವರ್ಗಾವಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿರುವ ಅಲೋಕ್ ವರ್ಮಾ ಸಿಬಿಐ ಮುಖ್ಯಸ್ಥನಾಗಿ ಆಯ್ಕೆಯಾದ ದಿನದಿಂದಲೂ ನಾನು ಸಂಸ್ಥೆಯ ಸಮಗ್ರತೆ ಕಾಪಾಡಲು ಪ್ರಯತ್ನಿಸಿದ್ದೆ.

ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಯಾವುದೇ ರೀತಿಯ ಬಾಹ್ಯ ಒತ್ತಡಗಳಿಗೆ ಒಳಗಾಗದೆ ಕಾರ್ಯ ನಿರ್ವಹಿಸಬೇಕು. ಆದರೆ, ಕೆಲ ವ್ಯಕ್ತಿಗಳ ಸ್ವಹಿತಾಸಕ್ತಿಗೆ ನನ್ನ ಪ್ರಯತ್ನಗಳೆಲ್ಲವೂ ಬಲಿಯಾಯಿತು ಎಂದು ನೊಂದು ನುಡಿದಿದ್ದಾರೆ. ದುಃಖದ ವಿಚಾರವೆಂದರೆ ಕೇವಲ ಓರ್ವ ವ್ಯಕ್ತಿಯ ಸುಳ್ಳು ಆರೋಪಗಳಿಂದಾಗಿ ಕೇಂದ್ರ ಸರ್ಕಾರ ಬೇರೊಂದು ಇಲಾಖೆಗೆ ವರ್ಗಾವಣೆ ಮಾಡಿದೆ.

ಆದರೆ, ಇಲಾಖೆ ಯಾವುದೇ ಆದರೂ ನಾನು ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಮತ್ತೆ ಅವಕಾಶ ಲಭಿಸಿದರೆ ಕೆಲಸ ಮಾಡಲು ಸಿದ್ಧ ಎಂದು ಅಲೋಕ್ ವರ್ಮಾ ಹೇಳಿದ್ದಾರೆ.

ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಇದ್ದ ಆಯ್ಕೆ ಸಮಿತಿ ಗುರುವಾರವಷ್ಟೇ ಸಿಬಿಐ ನಿರ್ದೇಶಕ ಹುದ್ದೆಯಿಂದ ಅಲೋಕ್ ವರ್ಮಾ ಅವರನ್ನು ವರ್ಗಾವಣೆ ಮಾಡಿತ್ತು ಅಗ್ನಿ ಶಾಮಕದಳದ ಪ್ರಧಾನಿ ನಿರ್ದೇಶಕ(ಡೈರಕ್ಟರ್ ಜನರಲ್) ಹುದ್ದೆಗೆ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು.

Facebook Comments

Sri Raghav

Admin