‘ಕರ್ನಾಟಕದಲ್ಲಿ ಕುಮಾರಸ್ವಾಮಿ ಸಿಎಂ ಅಲ್ಲ ಕಾಂಗ್ರೆಸ್’ನ ಕ್ಲರ್ಕ್’ : ಮೋದಿ ಘರ್ಜನೆ

ಈ ಸುದ್ದಿಯನ್ನು ಶೇರ್ ಮಾಡಿ

 

Modi--01
ನವದೆಹಲಿ, ಜ.12- ಮುಂಬರುವ ಲೋಕಸಭಾ ಚುನಾವಣೆಯನ್ನು ಮೂರನೆ ಪಾಣಿಪಟ್ ಕದನ ಎಂದು ಬಣ್ಣಿಸಿ ಸಮರಕ್ಕೆ ಸಜ್ಜಾಗುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕರೆ ನೀಡಿದ ಬೆನ್ನಲ್ಲೇ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಅಮಿತೋತ್ಸಾಹ ಕಂಡುಬಂದಿತು.

ಪ್ರಧಾನಿ ಮೋದಿ ತಮ್ಮ ಸಮಾರೋಪ ಭಾಷಣದಲ್ಲಿ ಕರ್ನಾಟಕ ಸಿಎಂ ಕುಮಾರಸ್ವಾಮಿಯವರನ್ನು ಟಾರ್ಗೆಟ್ ಮಾಡಿದರು. ಕರ್ನಾಟಕದಲ್ಲಿ ಇದು ಮೈತ್ರಿ ಟ್ರೇಲರ್ ಅಷ್ಟೇ. ಮೈತ್ರಿ ಸರ್ಕಾರಕ್ಕೆ ಕೆಲತಿಂಗಳಷ್ಟೇ ಆಗಿದೆ. ಎಚ್.ಡಿ.ಕುಮಾರಸ್ವಾಮಿಯನ್ನು ಸಿಎಂ ಬದಲು ಕ್ಲರ್ಕ್ ಮಾಡಲಾಗಿದೆ ಎಂದು ವ್ಯಂಗ್ಯವಾಡಿದರು.

ಕರ್ನಾಟಕದ ಸಿಎಂ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರವನ್ನು ಕಾಂಗ್ರೆಸ್ ಕಾಡುತ್ತಿದೆ. ಇದು ಮೈತ್ರಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಸ್ಥಿತಿ ಎಂದು ಚಾಟಿ ಬೀಸಿದರು.

ಕಾಂಗ್ರೆಸ್ ಕೈಯಲ್ಲಿ ಕುಮಾರಸ್ವಾಮಿ ಅಸಹಾಯಕರಾಗಿ ವಿಲವಿಲ ಒದ್ದಾಡುತ್ತಿದ್ದಾರೆ. ಮಹಾಘಟಬಂಧನ್ ಟ್ರೇಲರ್ ಕೂಡಾ ಜೋರಾಗಿಯೇ ಇತ್ತು. ತೆಲಂಗಾಣದಲ್ಲೂ ಘಟಬಂಧನ್ ಗೆ ಸೋಲಾಯ್ತು..ನಾನು ಮುಖ್ಯಮಂತ್ರಿಯಲ್ಲ, ಕ್ಲರ್ಕ್ ಎಂದು ಕುಮಾರಸ್ವಾಮಿಯೇ ಹೇಳಿರುವುದಾಗಿ ತಿಳಿಸಿದರು.

# ಮಜಬೂತ್ ಸರ್ಕಾರ ಬೇಕಾಗಿದೆ :
ದೇಶಕ್ಕೆ ಬಲಶಾಲಿಯಾದ (ಮಜಬೂತ್) ಸರ್ಕಾರ ಬೇಕಾಗಿದೆ ಆದರೆ ಕಾಂಗ್ರೆಸ್‌, ಮಹಾಘಟಬಂಧನ್‌ ಮೂಲಕ ಅಸಹಾಯಕ (ಮಜ್ಬೂರ್‌) ಸರ್ಕಾರ ರಚಿಸುವ ಯತ್ನ ಮಾಡುತ್ತಿದೆ ಎಂದು ನರೇಂದ್ರ ಮೋದಿ ಹೇಳಿದರು. ಜೊತೆಗೆ ಇದಕ್ಕೆ ಕರ್ನಾಟಕದ ಮೈತ್ರಿ ಸರ್ಕಾರದ್ ಉದಾಹರಣೆ ನೀಡಿದರು.

ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಪೂರ್ಣ ಬಹುಮತದೊಂದಿಗೆ ಬಂದ ಸರ್ಕಾರವೊಂದು ಒಂದೂ ಭ್ರಷ್ಟಾಚಾರದ ಆರೋಪಗಳಿಲ್ಲದೆ ಆಡಳಿತ ನಡೆಸಿದೆ. ಇದು ಬಿಜೆಪಿಗೆ ಹೆಮ್ಮೆ ಎಂದು ಮೋದಿ ಬೆನ್ನುತಟ್ಟಿಕೊಂಡರು.

ಯುಪಿಎ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಮೋದಿ, ನಮಗೆ ಹಿಂದೆ ಇದ್ದ ಸರ್ಕಾರ ಭಾರತವನ್ನು ಅಂಧಕಾರಕ್ಕೆ ತಳ್ಳಿತ್ತು ಭ್ರಷ್ಟಾಚಾರ-ಹಗರಣಗಳಲ್ಲಿ ಮುಳುಗಿ ಭಾರತದ ಅಮೂಲ್ಯ 10 ವರ್ಷವನ್ನು ಅದು ಹಾಳು ಮಾಡಿತು ಎಂದು ಮೋದಿ ಹೇಳಿದರು.

ಲೋಕಸಭೆ ಚುನಾವಣೆಗಾಗಿ ಸಿದ್ಧತೆ :
ದೆಹಲಿಯ ರಾಮಲೀಲಾ ಮೈದಾನದಲ್ಲಿ ನಿನ್ನೆಯಿಂದ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಎರಡನೆ ದಿನವಾದ ಇಂದು ಲೋಕಸಭೆ ಚುನಾವಣೆಗಾಗಿ ನಡೆಸಬೇಕಾದ ಸಿದ್ಧತೆ ಮತ್ತು ಗೆಲುವಿನ ಕಾರ್ಯತಂತ್ರಗಳ ಬಗ್ಗೆ ನಾಯಕರು ಗಹನ ಚರ್ಚೆ ನಡೆಸಿದರು.

ಇದಲ್ಲದೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿರುವ ಜನಪ್ರಿಯ ಯೋಜನೆಗಳನ್ನು ಮತ್ತಷ್ಟು ವಿಸ್ತೃತ ಮತ್ತು ಪರಿಣಾಮಕಾರಿಯಾಗಿ ದೇಶದ ಜನರಿಗೆ ತಲುಪಿಸಬೇಕು. ಆ ಮೂಲಕ ಬಿಜೆಪಿ ಸಾಧನೆಯನ್ನು ಮನದಟ್ಟು ಮಾಡಿಕೊಡಬೇಕು ಎಂದು ಸಭೆಯಲ್ಲಿ ಮಾತನಾಡಿದ ಪಕ್ಷದ ಮುಖಂಡರು ಕರೆ ನೀಡಿದರು.

ರಫೇಲ್ ಯುದ್ಧ ವಿಮಾನ ಒಪ್ಪಂದ ವಿಷಯ ಮುಂದಿಟ್ಟುಕೊಂಡು ಕಾಂಗ್ರೆಸ್ ನಡೆಸುತ್ತಿರುವ ವಾಗ್ದಾಳಿಗಳಿಗೆ ಪರಿಣಾಮಕಾರಿ ಪ್ರತಿ ಸಮರ್ಥನೆಯನ್ನು ನೀಡುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

 

Facebook Comments

Sri Raghav

Admin