ಶಾಸ್ತ್ರೋಕ್ತವಾಗಿ ಬರ ಅಧ್ಯಯನ ಮಾಡಿದ ತಂಡ..!

ಈ ಸುದ್ದಿಯನ್ನು ಶೇರ್ ಮಾಡಿ

cb purಚಿಕ್ಕಬಳ್ಳಾಪುರ, ಜ.12- ಸಚಿವ ಸಂಪುಟದ ಉಪ ಸಮಿತಿ ಸದಸ್ಯರ ಬರ ಅಧ್ಯಯನ ತಂಡ ಜಿಲ್ಲೆಯಲ್ಲಿ ಶಾಸ್ತ್ರೋಕ್ತವಾಗಿ ನೋಡಿ ಮುಗಿಸುವ ಕಾಯಕವನ್ನು ಮುಂದುವರೆಸಿದಂತಿದೆ. ಹೌದು. ಇದು ಚಿಕ್ಕಬಳ್ಳಾಪುರ ಜಿಲ್ಲೆಯ ದೌರ್ಭಾಗ್ಯ.

ಬಯಲು ಸೀಮೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಪಡುವ ಪರಿಸ್ಥಿತಿ. ಒಂದು ಕಾಲದಲ್ಲಿ ನಾಡಿಗೆ ಮಾತ್ರವಲ್ಲ ದೇಶಕ್ಕೆ ಎತ್ತೇಚ್ಚವಾಗಿ ಹಣ್ಣು-ಹಂಪಲು-ಹಾಲು ಕೊಟ್ಟ ಈ ಜಿಲ್ಲೆ ಕಾಲಕಾಲಕ್ಕೆ ಮಳೆಯಾಗದೆ ಇರುವ ಅಷ್ಟೋ ಇಷ್ಟೋ ಮಳೆ ನೀರಲ್ಲಿ ಇಲ್ಲಿನ ರೈತ ಸಾಯಲೂ ಆಗದೆ ಬದುಕಲೂ ಆಗದೆ ದಿನ ದೂಡುವ ಪರಿಸ್ಥಿತಿ ಇದೆ.

ಹಾಗಾಗಿ  ಈ ಜಿಲ್ಲೆ ಒಂದು ರೀತಿ ಶಾಪಗ್ರಸ್ತ ಜಿಲ್ಲೆ ಎಂದರೆ ತಪ್ಪಾಗಲಾರದು. ಅದರಂತೆ ಶಾಸ್ತ್ರೋಕ್ತವಾಗಿ ಜಿಲ್ಲೆಯಲ್ಲಿ ಉದ್ಭವಿಸಿರುವ ಬರ ಪರಿಸ್ಥಿತಿ ವೀಕ್ಷಿಸಲು ರಾಜ್ಯ ಬರ ಅಧ್ಯಯನ ತಂಡ ಶುಕ್ರವಾರ ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಬರ ಪೀಡಿತ ಪ್ರದೇಶಗಳಿಗೆ ಭೈೀಟಿ ನೀಡಿ ಪರಿಶೀಲನೆ ನಡೆಸಿತು.

ಕೃಷಿ ಸಚಿವ ಎನ್.ಹೆಚ್.ಶಿವಶಂಕರರೆಡ್ಡಿ, ಸಚಿವರಾದ ವೆಂಕಟರಮಣಪ್ಪ, ಎಸ್.ಆರ್.ಶ್ರೀನಿವಾಸ್ ಅವರನ್ನೊಳಗೊಂಡ ತಂಡ ಶಿಡ್ಲಘಟ್ಟ ತಾಲ್ಲೂಕಿನ ಗಂಭೀರನಹಳ್ಳಿಯಲ್ಲಿ ಮುನಿಸ್ವಾಮೆಗೌಡ ಅವರ ಜಮೀನಿನಲ್ಲಿ ನಷ್ಟವಾಗಿರುವ ಅವರೇ ಬೆಳೆಯನ್ನು ವೀಕ್ಷಿಸಿತು. ನಂತರ ಕಳ್ಯಾಪುರ ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಟ್ಯಾಂಕರ್ ನೀರು ಸರಬರಾಜು ಹಾಗೂ ಟಾಸ್ಕ್ ಪೋರ್ಸ್ ಕಾಮಗಾರಿಯನ್ನು ವೀಕ್ಷಿಸಿ ಪರಿಶೀಲನೆ ನಡೆಸಿದರು.

ನಂತರ ಹಿರೇಬಲ್ಲ ಕೆರೆಯಲ್ಲಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾರ್ಯ ವೀಕ್ಷಣೆ ಮಾಡಿ, ಕೂಲಿಕಾರರೊಂದಿಗೆ ಸಮಸ್ಯೆಗಳ ಕುರಿತು ಚರ್ಚಿಸಿದರು. ತದ ನಂತರ ಮಲ್ಲೇನಹಳ್ಳಿ ಗ್ರಾಮದ ಮುಸುಕಿನ ಜೋಳದ ಬೆಳೆಯ ನಷ್ಟ ವೀಕ್ಷಣೆ ಮಾಡಿದರು.ಬರ ಅಧ್ಯಯನ ನಡೆಸುವ ವೇಳೆ ಪ್ರತಿ ಬಾರಿ ವಾಗ್ದಾನ ಮಾಡುವಂತೆ ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡುವ ಭರವಸೆಯನ್ನು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ರಾಜ್ಯ ಬರ ಅಧ್ಯಯನ ತಂಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಒಂದೆಡೆ ವ್ಯವಸ್ಥಿತವಾಗಿ ಕುಳಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಭರವಸೆ ನೀಡಿತು. ಈ ಸಭೆಯಲ್ಲಿ ಕುಡಿಯುವ ನೀರು, ಬೆಳೆ ಹಾನಿ, ಮೇವು ಪೂರೈಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.

ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ಸಚಿವ ಸಂಪುಟದ ಉಪ ಸಮಿತಿಯ ಬರ ಅಧಯನ ತಂಡಕ್ಕೆ ಕಳೆದ ಬಾರಿ ಬರ ಅಧ್ಯಯನ ತಂಡಕ್ಕೆ ವಿವರಿಸಿದ್ದ ಮಾಹಿತಿಯನ್ನೆ ಮತ್ತೆ ಮೆಲುಕು ಹಾಕಿ ವಿವರಿಸಿದರು. ಒಟ್ಟಾರೆ ಜಿಲ್ಲೆಯಲ್ಲಿ ಬರ ನಿರ್ವಹಣೆಗಾಗಿ 101.15 ಕೋಟಿ ಹಣ ಬೇಡಿಕೆ ಇದೆ ಎಂದು ವಿವರಿಸಿ ಸುಮ್ಮನಾದರು. ಜಿಪಂ ಸಿಇಒ ಗುರುದತ್ ಹೆಗ್ಡೆ ಸಿದ್ದಪಡಿಸಿಕೊಂಡ ಮಾಹಿತಿಯನ್ನು ಉಪ ಸಮಿತಿ ಹೀಗೆ ವಿವರಿಸಿದರು.

ಜಿಲ್ಲೆಯ ಬರ ಅಧ್ಯಯನ ಮಾಡಿ ವರದಿ ಸಲ್ಲಿಸಲು ಕಳೆದ ಆರು ತಿಂಗಳ ಹಿಂದೆ ಕೇಂದ್ರದಿಂದ ಬಂದ ಬರ ಅದ್ಯಾಯನ ತಂಡಕ್ಕೂ ಜಿಲ್ಲೆಯ ಜಿಲ್ಲಾಡಳಿತ ಸತ್ಕಾರ ಊಟೋಪಚಾರಗಳಿಗೆ ಸೀಮಿತಗೊಳಿಸಿ ಚಿಂತಾಮಣಿ ತಾಲ್ಲೂಕಿನ ಒಂದು ಗ್ರಾಮದ ಜಮೀನಿನ ಬೆಳೆ ವೀಕ್ಷಿಸಲು ಎಲ್ಲಾ ಸಿದ್ದತೆ ಮಾಡಿ ತಂಡ ಬಂದೊಡನೆ ಹಾರ ತುರಾಯಿಗಳೊಂದಿಗೆ ಅವರಿಗೆ ಸತ್ಕಾರ ಮಾಡಿ ಜಿಲ್ಲೆಯ ಜ್ವಲಂತ ಸಮಸ್ಯೆಯನ್ನು ಸಾಮಾನ್ಯ ರೈತರು ಹೇಳಿಕೊಳ್ಳಲು ಅನುವು ಮಾಡದೆ ಜಿಲ್ಲಾಡಳಿತವೇ ಸಿದ್ದಪಡಿಸಿ ಹೇಳಿಕೊಟ್ಟ ಮಾಹಿತಿಯನ್ನು ಬರ ಅದ್ಯಾಯನದ ಮುಂದೆ ಹೇಳುವಂತೆ ಮಾಡುವಲ್ಲಿ ನಮ್ಮ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಯಶಸ್ವಿಯಾಗಿತ್ತು ಎಂಬುದು ಜನರ ಅಭಿಪ್ರಾಯ.

ಸಭೆಯಲ್ಲಿ ಕೃಷಿ ಇಲಾಖೆಯ ಕಾರ್ಯದರ್ಶಿ ಮಹೇಶ್ವರರಾವ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್.ವಿ.ಮಂಜುನಾಥ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‍ರೆಡ್ಡಿ, ಅಪರ ಜಿಲ್ಲಾಧಿಕಾರಿ ಆರತಿ ಆನಂದ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Facebook Comments