ಲೋಕಸಭೆ ಚುನಾವಣೆಗೆ ಕೆಲವು ಕ್ಷೇತ್ರಗಳಲ್ಲಿ ಬೇರೆ ಪಕ್ಷಗಳ ಮುಖಂಡರಿಗೆ ಬಿಜೆಪಿ ಗಾಳ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-BJP

ಬೆಂಗಳೂರು,ಜ.12- ಲೋಕಸಭೆ ಚುನಾವಣೆಯಲ್ಲಿ ಮಿಷನ್-20 ಗುರಿಯೊಂದಿಗೆ ಮಹಾಸಮರಕ್ಕೆ ಧುಮುಕುತ್ತಿರುವ ಬಿಜೆಪಿಗೆ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆ ಎದುರಾಗಿರುವುದರಿಂದ ಬೇರೆ ಪಕ್ಷಗಳ ಮುಖಂಡರಿಗೆ ರತ್ನಗಂಬಳಿ ಹಾಕಲು ಮುಂದಾಗಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 6-8 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಅಭ್ಯರ್ಥಿಗಳಿಗೆ ಪ್ರಬಲ ಸ್ಪರ್ಧಿವೊಡ್ಡುವಂತಹ ಅಭ್ಯರ್ಥಿಗಳು ಬಿಜೆಪಿಯಲ್ಲಿ ಇಲ್ಲದಿರುವುದು ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.

ಕಳೆದ ನಾಲ್ಕೈದು ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ 28 ಲೋಕಸಭಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತಾದರೂ ಇದರಲ್ಲಿ ಗಂಭೀರವಾಗಿ ಸ್ಪರ್ಧೆ ನಡೆದದ್ದು 20ರಿಂದ 22 ಕ್ಷೇತ್ರಗಳಲ್ಲಿ ಮಾತ್ರ.

ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲೂ 28 ಲೋಕಸಭಾ ಕ್ಷೇತ್ರಗಳ ಪೈಕಿ ಅತಿಹೆಚ್ಚು ಅಂದರೆ 19 ಕ್ಷೇತ್ರಗಳನ್ನು ಮಾತ್ರ ಗೆದ್ದಿದ್ದು ಅದರಸಾಧನೆ. 1996ರ ನಂತರ ರಾಜ್ಯದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬಂದ ನಂತರ ಲೋಕಸಭೆ ಚುನಾವಣೆಯಲ್ಲಿ ಅದರ ನಾಗಲೋಟವನ್ನು ಕಟ್ಟಿ ಹಾಕಲು ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಸಾಧ್ಯವಾಗಿಲ್ಲ.

ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಈವರೆಗೂ ಉತ್ತಮ ಸಾಧನೆಯನ್ನೇ ಮಾಡಿಕೊಂಡು ಬಂದಿದೆ. ಎಸ್.ಎಂ.ಕೃಷ್ಣ , ಧರಂಸಿಂಗ್, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೂ ಬಿಜೆಪಿಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ಆದರೆ ಈಗಲೂ ಬಿಜೆಪಿ ರಾಜ್ಯದ 6ರಿಂದ 7 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿದೆ.

# ಎಲ್ಲೆಲ್ಲಿ ಅಭ್ಯರ್ಥಿಗಳ ಕೊರತೆ:
ಜೆಡಿಎಸ್ ಪ್ರಾಬಲ್ಯವಿರುವ ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ , ಕೋಲಾರ, ಚಾಮರಾಜನಗರ, ಚಿತ್ರದುರ್ಗ, ರಾಯಚೂರು, ಬಳ್ಳಾರಿ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳು ಇಲ್ಲದಿರುವುದು ಕಮಲ ನಾಯಕರನ್ನು ಚಿಂತೆಗೀಡು ಮಾಡಿದೆ.

ಈ ಹಿಂದೆ ಬಳ್ಳಾರಿ, ಚಿತ್ರದುರ್ಗ, ರಾಯಚೂರಿನಲ್ಲಿ ಬಿಜೆಪಿ ಗೆದ್ದಿತ್ತಾದರೂ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ತಿರುವು-ಮುರುವು ಆಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಅವರು ಕೆಲವೇ ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು.

ಕೋಲಾರದಲ್ಲಿ ಹಾಲಿ ಸಂಸದ ಕೆ.ಎಚ್.ಮುನಿಯಪ್ಪಗೆ 2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಡಿ.ಎಸ್.ವೀರಯ್ಯ ಭಾರೀ ಪೈಪೋಟಿ ನೀಡಿದ್ದರಾದರೂ 2014ರಲ್ಲಿ ಅಷ್ಟು ಪೈಪೆÇೀಟಿ ನೀಡಲು ಸಾಧ್ಯವಾಗಲಿಲ್ಲ. ಇದೇ ಪರಿಸ್ಥಿತಿ ಚಾಮರಾಜನಗರದಲ್ಲೂ ಇದೆ.2009ರಲ್ಲಿ ಅಂದು ಬಿಜೆಪಿಯ ಎ.ಆರ್.ಕೃಷ್ಣಮೂರ್ತಿ ಗೆದ್ದೇ ಬಿಟ್ಟರು ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಕಾಂಗ್ರೆಸ್‍ನ ಧ್ರುವನಾರಾಯಭ್ ಕೆಲವೇ ಕೆಲವು ಮತಗಳ ಅಂತರದಿಂದ ವಿಜೇತರಾಗಿದ್ದರು.

# ಎಲ್ಲೆಲ್ಲಿ ಯಾರ್ಯಾರಿಗೆ ಗಾಳ:
ಹಾಸನದಲ್ಲಿ ಜೆಡಿಎಸ್‍ಗೆ ಸ್ಪರ್ಧೆಯೊಡ್ಡಲು ಮಾಜಿ ಸಚಿವ ಎ.ಮಂಜು, ಮಂಡ್ಯದಲ್ಲಿ ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ, ಬೆಂಗಳೂರು ಗ್ರಾಮಾಂತರದಿಂದ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ , ರಾಯಚೂರಿಗೆ ಹಾಲಿ ಸಂಸದ ಬಿ.ವಿ.ನಾಯಕ್, ಬಳ್ಳಾರಿಯಲ್ಲಿ ಹಾಲಿ ಶಾಸಕ ಬಿ.ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್, ಚಿತ್ರದುರ್ಗದಿಂದ ಮಾದಾರ ಚನ್ನಯ್ಯ ಸ್ವಾಮಿ ಅವರನ್ನು ಕರೆತರಲು ಬಿಜೆಪಿ ರಣತಂತ್ರ ರೂಪಿಸಿದೆ.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರವಿದ್ದರೂ ಈಗಲೂ ಎ.ಮಂಜು ವಿರೋಧ ಪಕ್ಷದವರಿಗಿಂತಲೂ ಪ್ರಬಲವಾಗಿ ದಳಪತಿಗಳನ್ನು ಟೀಕೆ ಮಾಡುತ್ತಲೇ ಇದ್ದಾರೆ.  ಜೆಡಿಎಸ್‍ನಿಂದ ಕಾಂಗ್ರೆಸ್‍ಗೆ ಹೋಗಿ ತೆರೆಮರೆಗೆ ಸರಿದಿರುವ ಮಾಜಿ ಸಚಿವ ಚೆಲುವರಾಯಸ್ವಾಮಿ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನವನ್ನು ಮುಂದುವರೆಸಿದೆ. ಆದರೆ ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ಅಷ್ಟಕ್ಕಷ್ಟೇ ಎನ್ನುವಂತಿರುವುದರಿಂದ ಅವರ ನಡೆ ಇನ್ನೂ ನಿಗೂಢವಾಗಿಯೇ ಇದೆ .

ಮತ್ತೊಂದೆಡೆ ಬಿಜೆಪಿ ಜೆಡಿಎಸ್‍ನ ಪ್ರಭಾವಿ ನಾಯಕಿ ಲಕ್ಷ್ಮಿ ಅಶ್ವಿನ್ ಗೌಡ ಅವರನ್ನು ಕೂಡ ಸೆಳೆಯುವ ತಂತ್ರ ಮುಂದುವರೆಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಗಡಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತ ಎಚ್.ಸಿ.ಬಾಲಕೃಷ್ಣ ಅವರನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಚಿಂತನೆ ನಡೆದಿದೆ. ಆದರೆ ಅವರ ನಿರ್ಧಾರ ಏನೆಂಬುದು ಈವರೆಗೂ ಖಚಿತಪಟ್ಟಿಲ್ಲ.

ಚಿತ್ರದುರ್ಗದಿಂದ ಮಾಜಿ ಸಂಸದ ಜನಾರ್ಧನ ಸ್ವಾಮಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇದೆ. ಆದರೆ ಕೇಂದ್ರದ ವರಿಷ್ಠರು ಇಲ್ಲಿ ಮಾದಾರ ಚನ್ನಯ್ಯ ಸ್ವಾಮಿ ಅವರನ್ನು ಕಣಕ್ಕಿಳಿಸುವ ಮೂಲಕ ಹೊಸ ಪ್ರಯೋಗಕ್ಕೆ ಕೈ ಹಾಕುವ ಸಾಧ್ಯತೆ ಇದೆ.

ಏಕೆಂದರೆ ಕಳೆದ ವಿಧಾನಸಭೆಯಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳನ್ನು ಬಿಜೆಪಿ ತನ್ನ ಬುಟ್ಟಿಗೆ ಹಾಕಿಕೊಂಡಿತ್ತು. ಹೀಗಾಗಿ ಯಾವುದೇ ಅಭ್ಯರ್ಥಿ ಕಣಕ್ಕಿಳಿದರೂ ಅಚ್ಚರಿಪಡಬೇಕಿಲ್ಲ. ಒಟ್ಟಾರೆ ಪ್ರತಿಯೊಂದು ಕ್ಷೇತ್ರಕ್ಕೂ ಅಳೆದುತೂಗಿಯೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ.

Facebook Comments

Sri Raghav

Admin