ಉತ್ತರ ಪ್ರದೇಶದಲ್ಲಿ ಹೊಸ ರಾಜಕೀಯ ಪರ್ವ ಆರಂಭ, ಎಸ್‍ಪಿ-ಬಿಎಸ್‍ಪಿ ಮೈತ್ರಿ

ಈ ಸುದ್ದಿಯನ್ನು ಶೇರ್ ಮಾಡಿ

SP-BSP--01

ಲಕ್ನೋ, ಜ.12-ಮುಂಬರುವ ಲೋಕಸಭೆ ಚುನಾವಣೆಗಾಗಿ ರಾಜಕೀಯ ಚಟುವಟಿಕೆಗಳು ಬಿರುಸಾಗಿವೆ. ಉತ್ತರಪ್ರದೇಶದಲ್ಲಿ ಬಿಜೆಪಿ ಪ್ರಾಬಲ್ಯ ತಪ್ಪಿಸಲು ಸಮಾಜವಾದಿ ಪಕ್ಷ (ಎಸ್‍ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ಮೈತ್ರಿ ಮಾಡಿಕೊಂಡಿದ್ದು, ಹೊಸ ರಾಜಕೀಯ ಪರ್ವಕ್ಕೆ ಮುನ್ನುಡಿ ಬರೆದಿವೆ.

ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷವನ್ನು ಮೈತ್ರಿಯಿಂದ ಈ ಎರಡೂ ಪಕ್ಷಗಳು ದೂರವಿಟ್ಟಿವೆ. ಎಸ್‍ಪಿ ಮುಖಂಡ ಅಖಿಲೇಶ್ ಯಾದವ್ ಮತ್ತು ಬಿಎಸ್‍ಪಿ ಅಧಿನಾಯಕಿ ಮಾಯಾವತಿ ಲಕ್ನೋದಲ್ಲಿ ಇಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮೈತ್ರಿಯನ್ನು ಅಧಿಕೃತವಾಗಿ ಘೋಷಿಸಿದರು.

80 ಸದಸ್ಯ ಬಲದ ಉತ್ತರ ಪ್ರದೇಶ ಲೋಕಸಭಾ ಸ್ಥಾನಗಳಲ್ಲಿ ಎಸ್‍ಪಿ ಮತ್ತು ಬಿಎಸ್‍ಪಿ ನಡುವೆ ಒಟ್ಟು 76 ಸ್ಥಾನಗಳಲ್ಲಿ ಹೊಂದಾಣಿಕೆಯಾಗಿದೆ. ಪರಸ್ಪರ ಬೆಂಬಲದೊಂದಿಗೆ ಎರಡೂ ಪಕ್ಷಗಳು ತಲಾ 38 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.

ಈ ಮೈತ್ರಿಯಲ್ಲಿ ಕಾಂಗ್ರೆಸ್‍ನನ್ನು ದೂರವಿಟ್ಟಿರುವ ಎರಡೂ ಪಕ್ಷಗಳು, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಪ್ರತಿನಿಧಿಸಿರುವ ರಾಯ್‍ಬರೇಲಿ ಮತ್ತು ಅಮೇಥಿ ಲೋಕಸಭಾ ಕ್ಷೇತ್ರಗಳಲ್ಲಿ ತಮ್ಮ ಪಕ್ಷಗಳ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದಿರುವ ಬಗ್ಗೆಯೂ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉಳಿದರೆಡು ಸ್ಥಾನಗಳನ್ನು ತಮಗೆ ಬೆಂಬಲ ನೀಡುವ ಪ್ರಾದೇಶಿಕ ಪಕ್ಷಕ್ಕೆ ಬಿಟ್ಟುಕೊಟ್ಟಿವೆ. ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಾಯವತಿ ಮತ್ತು ಅಖಿಲೇಶ್ ಈ ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು.

ಕಾಂಗ್ರೆಸ್ ಬೋಫೋರ್ಸ್ ಫಿರಂಗಿ ಹಗರಣದಲ್ಲಿ ದೊಡ್ಡ ಹಗರಣ ನಡೆಸಿದ್ದರೆ, ಈಗ ಬಿಜೆಪಿ ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಭಾರೀ ಅವ್ಯವಹಾರ ಮಾಡಿದೆ ಎಂದು ಟೀಕಿಸಿದರು.

ಬಿಜೆಪಿ ದುರಾಡಳಿತ ಅಂತ್ಯವಾಗುವ ಕಾಲ ಸನ್ನಿಹಿತವಾಗಿದೆ. ರಾಜ್ಯದ ಮತ್ತು ದೇಶದ ಹಿತದೃಷ್ಟಿಯಿಂದ ಈ ಮೈತ್ರಿಗೆ ಎರಡೂ ಪಕ್ಷಗಳು ಕೈಜೋಡಿಸಿವೆ ಎಂದು ಅವರು ಹೇಳಿದರು.

ಸರ್ವಸಮ್ಮತ ನಿರ್ಧಾರದೊಂದಿಗೆ ನಾವು ಬಿಎಸ್‍ಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಮಾಯಾವತಿ ಅವರಿಗೆ ಗೌರವ ನೀಡಿದರೆ ಅದು ನನಗೆ ಗೌರವ ನೀಡಿದಂತೆ, ಮಾಯಾವತಿಯವರನ್ನು ಅಪಮಾನಿಸಿದರೆ ಅದು ನನಗೆ ಅಪಮಾನ ಮಾಡಿದಂತೆ ಎಂದು ಅಖಿಲೇಶ್ ಪರೋಕ್ಷವಾಗಿ ಅತೃಪ್ತ ಎಸ್‍ಪಿ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಅಖಿಲೇಶ್ ಮತ್ತು ಮಾಯಾವತಿ ಇತ್ತೀಚೆಗೆ ರಾಜಧಾನಿ ದೆಹಲಿಯಲ್ಲಿ ಕಳೆದ ವಾರ ಈ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಿದ್ದರು. ಉತ್ತರಪ್ರದೇಶದಲ್ಲಿ ಬಿಜೆಪಿಯನ್ನು ಮಣಿಸಲು ಎರಡು ಪಕ್ಷಗಳು ಒಗ್ಗೂಡುವ ವ್ಯಾಪಕ ಚರ್ಚೆ ನಡೆದಿತ್ತು.

Facebook Comments

Sri Raghav

Admin