ಮೇಲುಕೋಟೆಯ ಕಲ್ಯಾಣಿ ಜೀರ್ಣೋದ್ಧಾರ ವೇಳೆ ಅಪರೂಪದ ಅವಶೇಷಗಳು ಪತ್ತೆ ..!

ಈ ಸುದ್ದಿಯನ್ನು ಶೇರ್ ಮಾಡಿ

Melukotre-v-01

ಮೇಲುಕೋಟೆ, ಜ.12- ಐತಿಹಾಸಿಕ ಪಂಚ ಕಲ್ಯಾಣಿಯ ಸಮುಚ್ಚಯದಲ್ಲಿ ಹಳೆಯ ಅರಮನೆಯಂತಿರುವ ತೊಟ್ಟಿಯ ಮನೆಗಳ ಅವಶೇಷ ಹಾಗೂ ನಾಲ್ಕು ಕಡೆ ಶಿಲ್ಪಕಲಾಕೃತಿಯಿರುವ ಮಂಟಪದ ಅಡಿಪಾಯಗಳು ಪತ್ತೆಯಾಗಿವೆ.

ಮೇಲುಕೋಟೆಯ ಕಲ್ಯಾಣಿ ಮತ್ತು ಕೊಳಗಳನ್ನು ಜೀರ್ಣೋದ್ಧಾರ ಮಾಡಿ ಸಂರಕ್ಷಿಸುವ ಕಾರ್ಯವನ್ನು ಇನ್‍ಫೋಸಿಸ್ ಫೌಂಡೇಶನ್ ಸಂಸ್ಥೆ ಕೈಗೆತ್ತಿಕೊಂಡಿದ್ದು, ಧಾರಾ ಮಂಟಪ ಹಿಂಭಾಗ ಮತ್ತು ಪಾರ್ಕಿಂಗ್ ಸ್ಥಳದಲ್ಲಿ ಮಣ್ಣು ತೆಗೆಯುವ ವೇಳೆ ಈ ಐತಿಹಾಸಿಕ ಅವಶೇಷಗಳು ಪತ್ತೆಯಾಗಿವೆ.

ದಕ್ಷಿಣ ಭಾರತದ ಅತಿ ವಿಶಾಲ ಹಾಗೂ ಸುಂದರವಾದ ಕಲ್ಯಾಣಿಯ ಪರಿಸರ ಗಬ್ಬೆದ್ದು ಹೋಗಿದ್ದನ್ನು ವೀಕ್ಷಿಸಿದ್ದ ಇನ್‍ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಅವರು ಕಲ್ಯಾಣಿ ಪರಿಸರವನ್ನು ಸಂರಕ್ಷಿಸುವ ಜತೆಗೆ ನಿರಂತರವಾಗಿ ನಿರ್ವಹಣೆ ಮಾಡುವ ಸಂಕಲ್ಪ ಮಾಡಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಕಳೆದ ಹದಿನೈದು ದಿನಗಳಿಂದ ಪರಿಸರವನ್ನು ಸ್ವಚ್ಛಗೊಳಿಸಿ, ಧಾರಾ ಮಂಟಪದ ಸುತ್ತ ತುಂಬಿದ್ದ ಮಣ್ಣು ತೆಗೆಯುವ ಕೆಲಸ ಆರಂಭಿಸಿದ್ದರು.

ಈ ವೇಳೆ ನಡುವೆ ತೊಟ್ಟಿಯಿರುವ ಕಟ್ಟಡದ ಅವಶೇಷ ಹಾಗೂ ಮಂಟಪವಿದ್ದ ಅಡಿಪಾಯ ಪತ್ತೆಯಾಗಿದೆ. ಇದೇ ವೇಳೆ ಕಲ್ಯಾಣಿಗೆ ನೀರು ಹೋಗಲು ಪೂರ್ವಿಕರು ವೈಜ್ಞಾನಿಕವಾಗಿ ಮಾಡಲಾಗಿದ್ದ ಹಳೆಯ ಕಾಲದ ಕೊಳ ಮಣ್ಣಿನಿಂದ ಮುಚ್ಚಿ ಹೋಗಿದ್ದನ್ನೂ ಸ್ವಚ್ಛ ಮಾಡಲಾಗಿದೆ.

ಕಲ್ಯಾಣಿ ಸಮುಚ್ಚಯದಲ್ಲಿ ಕಂಡು ಬಂದಿರುವ ಈ ಅವಶೇಷಗಳು ಮೇಲುಕೋಟೆಯ ನಾಗರಿಕರಲ್ಲಿ ಅಚ್ಚರಿ ಮೂಡಿಸಿದೆ. ಇಡೀ ಕಲ್ಯಾಣಿ ಸಮುಚ್ಚವನ್ನು ಸಂರಕ್ಷಿಸಿ ನಿರ್ವಹಣೆ ಮಾಡುವ ಕಾರ್ಯ ಭರದಿಂದ ಸಾಗಿದ್ದು, ನಾಗರಿಕರ ಪ್ರಶಂಸೆಗೆ ಪಾತ್ರವಾಗಿದೆ.

Facebook Comments

Sri Raghav

Admin