ಸುಗ್ಗಿಯ ಹಿಗ್ಗು ತಗ್ಗಿಸಿದ ಸಾಮಗ್ರಿಗಳ ದುಬಾರಿ ಬೆಲೆ

ಈ ಸುದ್ದಿಯನ್ನು ಶೇರ್ ಮಾಡಿ

Sankranti--101

ಸಂಕ್ರಾಂತಿಯೆಂದರೆ ಸುಗ್ಗಿಯ ಹಿಗ್ಗು, ಬೆಳೆದ ಫಸಲನ್ನು ಪೂಜಿಸಿ, ಗೆಣಸು, ಅವರೆಕಾಯಿ, ಕಡಲೆಕಾಯಿಯನ್ನು ಬೇಯಿಸಿ ಸವಿಯುವ ಸಂಭ್ರಮ ಹೇಳತೀರದು, ಆದರೆ ಸುಗ್ಗಿ ಸಂಭ್ರಮದ ಹಿಗ್ಗನ್ನು ಹಬ್ಬದ ಸಾಮಗ್ರಿಗಳ ಬೆಲೆ ಏರಿಕೆ ಕುಗ್ಗಿಸಿದೆ.

ಕಳೆದ ದಶಕದಿಂದ ತಾಲೂನಕಿನಲ್ಲಿ ಸಮರ್ಪಕವಾಗಿ ಮಳೆಯಾಗದೆ ರೈತರ ಕೊಳವೆಬಾವಿಗಳು ಬಹುತೇಕ ಬತ್ತಿಹೋಗಿದ್ದು , ಬಿತ್ತಿ ಬೆಳೆ ಮೊಳಕೆಯಲ್ಲಿ ಕಮರಿ ಹೋಗಿದ್ದು ಒಂದೆಡೆಯಾದರೆ ಮತ್ತೊಂದು ಕಡೆ ಸಾರ್ವಜನಿಕರಿಗೆ ಕುಡಿಯಲು ನೀರಿಲ್ಲದೆ ಹಾಹಾಕಾರವುಂಟಾಗಿದೆ. ಇಂತಹ ಸಂದರ್ಭದಲ್ಲಿ ಸಂಕ್ರಾಂತಿ ಹಬ್ಬಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಹಬ್ಬಗಳು ಬಂತೆಂದರೆ ಉಚಿತವಾಗಿ ಕಬ್ಬು ಜಲ್ಲೆಗಳನ್ನು ನೀಡುವಂತಹ ಕಾಲವೊಂದಿತ್ತು , ಈಗ ಅದೆಲ್ಲ ಮರೀಚಿಕೆಯಾಗಿದೆ. ಕಬ್ಬು, ಕಡಲೆಕಾಯಿ, ಅವರೆಕಾಯಿ, ಗೆಣಸು, ಎಳಚಿಹಣ್ಣು, ಎಳ್ಳು,ಬೆಲ್ಲ, ಸಕ್ಕರೆ ಅಚ್ಚುಗಳು ಸಂಕ್ರಾಂತಿ ಪೂಜೆಗೆ ಅಗತ್ಯವಾಗಿ ಬೇಕಾಗಿದ್ದು, ದುಬಾರಿ ಬೆಲೆಯಲ್ಲೂ ಜನತೆ ವಿಧಿಯಿಲ್ಲದೆ ಖರೀದಿಸುವಂತಾಗಿದೆ, ಕಬ್ಬ ಜಲ್ಲೆಗೆ 40 ರಿಂದ 50 ರೂ ಅವರೆ ಕೆಜಿಗೆ 75 ರಿಂದ 80,ಗೆಣಸು-50, ಕಡಲೆಕಾಯಿ 50 ರಿಂದ 60 ರೂ. ಇನ್ನು ಉಳಿದ ಸಾಮಗ್ರಿಗಳು ಕೈಗೆಟುಕದಂತಾಗಿದೆ.

ತರಕಾರಿ ಬೆಲೆ ಕಾರ: ನುಗ್ಗೇಕಾಯಿ 80 ರೂ.(ಕೆ.ಜಿ.ಗಳಲ್ಲಿ) ಸೌತೇಕಾಯಿ 3ಕ್ಕೆ 20 ರೂ.ಹುರಳಿಕಾಯಿ 40, ಬದನೆಕಾಯಿ-30, ಅಲುಗಡ್ಡೆ-30, ಕ್ಯಾರೆಟ್-30, ಟಮೋಟೊ-40ರಿಂದ 50, ಮಣಸಿನಕಾಯಿ-50, ನವಿಲುಕೋಸು-30, ಹಿರೇಕಾಯಿ-40, ಬದನೆ-30, ಎಲೆಕೋಸು-20, ಕುಂಬಳ-20, ನವಿಲುಕೋಸು-40, ಬೆಂಡೇಕಾಯಿ-40, ಮೂಲಂಗಿ-30, ಗೋರಿಕಾಯಿ-30, ಕ್ಯಾಪ್ಸಿಕಮ್-40 ರೂಗಳಷ್ಟಿದೆ.

ಹೂವಿನ ಬೆಲೆ: ಸುಗಂಧರಾಜ150-160 (ಕೆ.ಜಿ.ಗಳಲ್ಲಿ), ಸೇವಂತಿಗೆ-160, ಚೆಂಡುಹೂವು-120, ಕನಕಾಂಬರ-600, ಕಾಕಡ-500, ಗುಲಾಬಿ-100 ಗಳಷ್ಟಿದೆ. ಸಂಕ್ರಾಂತಿ ಹಬ್ಬ ಇನ್ನೂ ಮೂರು ದಿನಗಳು ಇರುವಾಗಲೇ ತರಕಾರಿ ಹೂವು ಹಣ್ಣುಗಳು ದುಬಾರಿಯಾಗಿದೆ, ಇನ್ನು ಹಬ್ಬದ ದಿನ ಈ ಬೆಲೆ ಮತ್ತಷ್ಟು ದುಬಾರಿಯಾಗುವುದರಲ್ಲಿ ಸಂದೇಹವೇ ಇಲ್ಲ.

ಸುಗ್ಗಿಯ ಹಿಗ್ಗು ತಗ್ಗಿಸಿದ ಸಾಮಗ್ರಿ ದುಬಾರಿ ಬೆಲೆ ಸಂಕ್ರಾಂತಿ ಹಬ್ಬವನ್ನು ಗ್ರಾಮೀಣ ಭಾಗಗಳಲ್ಲಿ ವಿಶೇಷವಾಗಿ ಶ್ರದ್ದಾ ಭಕ್ತಿಯಿಂದ ತಮ್ಮ ರಾಸುಗಳನ್ನು ಸಿಂಗರಿಸಿ ಮೆರವಣಿಗೆ ಮಾಡಿ ಕಿಚ್ಚು ಹಾಯಿಸುವ ವೈವಿಧಮಯ ಕ್ರೀಡೆಗಳೊಂದಿಗೆ ಆಚರಣೆ ಮಾಡಲಾಗುತ್ತಿತ್ತು. ಆದರೆ ಮಳೆಯಿಲ್ಲದೆ ಸಮರ್ಪಕವಾಗಿ ಬೆಳೆಯಿಲ್ಲದೆ ದನಕುರುಗಳಿಗೆ ಮೇವಿಲ್ಲದೆ ರಾಸುಗಳನ್ನು ಮಾರಿಕೊಳ್ಳುತ್ತಿದ್ದಾರೆ,.

ಇಂತಹ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗಗಳಲ್ಲೂ ಹಬ್ಬದ ಸಂತಸವೇ ಕಣ್ಮರೆಯಾಗುತ್ತಿದೆ, ಬೆಳೆಗಾಗಿ ಮಾಡಿದ ಸಾಲವನ್ನು ತೀರಿಸಲಾಗದ ಪರಿಸ್ಥಿತಿಯಲ್ಲಿ ರೈತರು ಕೈಚಲ್ಲಿ ಕುಳಿತಿದ್ದಾರೆ. ಮಾರುಕಟ್ಟೆಯಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಬ್ಬದ ಹಿಂದಿನ ಮೂರು ದಿನಗಳಿಂದಲೇ ಭರ್ಜರಿ ವ್ಯಾಪಾರವಾಗುತ್ತಿತ್ತು ಆದರೆ ಪ್ರಸ್ತುತ ಸಾಧಾರಣ ವ್ಯಾಪಾರದಿಂದ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ.

Facebook Comments