ಆಪ್ತ ಪುಟ್ಟರಂಗಶೆಟ್ಟಿ ಪರ ಸಿದ್ದರಾಮಯ್ಯ ಬ್ಯಾಟಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-Puttarangashet
ಹುಬ್ಬಳ್ಳಿ, ಜ.12- ವಿಧಾನಸೌಧದ ಬಳಿ ಹಣ ಸಿಕ್ಕ ಪ್ರಕರಣದಲ್ಲಿ ಎಸಿಬಿ ತನಿಖೆ ನಡೆಸುತ್ತಿದೆ. ವರದಿ ಬರಲಿ ನೋಡೋಣ. ಮೊದಲೇ ಈ ಕುರಿತು ಹೇಳಿಕೆ ನೀಡುವುದು ಸರಿಯಲ್ಲ ಎಂದು ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಪುಟ್ಟರಂಗಶೆಟ್ಟಿ ಪರ ಬ್ಯಾಟಿಂಗ್ ಬೀಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಒಬ್ಬರ ಬಳಿ ಹಣ ಸಿಕ್ಕರೆ ಅದು ಸಚಿವರದ್ದು ಎಂದು ಹೇಳುವುದು ಹೇಗೆ? ಅವರದ್ದೇ ಎನ್ನುವುದು ಊಹಾಪೋಹ. ತನಿಖೆ ಮುಗಿಯಲಿ ಎಂದರು.

ಮೊದಲೇ ನಾವು ಹೇಳಿಕೆ ನೀಡುವುದು ಸರಿಯಲ್ಲ. ಎಸಿಬಿ ತನಿಖೆ ನಡೆಸುತ್ತಿದೆ. ತನಿಖೆ ನಂತರ ಹಣ ಯಾರದ್ದೆಂಬುದು ಗೊತ್ತಾಗಲಿದೆ. ಆನಂತರ ನೋಡೋಣ ಎಂದು ಹೇಳಿದರು. ಲೋಕಸಭೆ ಚುನಾವಣೆಗೆ ಜೆಡಿಎಸ್ ಜತೆ ಸೀಟು ಹಂಚಿಕೆ ಬಗ್ಗೆ ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ. ಈ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ ನೀಡಿರುವ ಹೇಳಿಕೆ ಅವರ ವೈಯಕ್ತಿಕ ವಿಚಾರ. ಸಭೆ ನಡೆಸದೆ ಏನೂ ಹೇಳಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿಬಿಐ ನಿರ್ದೇಶಕ ಅಲೋಕ್ ವರ್ಮ ಅವರ ರಾಜೀನಾಮೆ ಹಿಂದೆ ದೊಡ್ಡ ಹುನ್ನಾರ ಅಡಗಿದೆ. ರಫೇಲ್ ಹಗರಣ ಬಯಲಾಗುತ್ತದೆ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿದೆ. ಇದೆಲ್ಲ ಪ್ರಧಾನಿ ನರೇಂದ್ರ ಮೋದಿ ಅವರ ಕುತಂತ್ರ ಎಂದು ಆರೋಪಿಸಿದರು.

ಎಲ್ಲರಿಗೂ ಕೋಮುವಾದಿ ಬಿಜೆಪಿಯನ್ನು ಸೋಲಿಸುವುದೇ ಉದ್ದೇಶವಾಗಿದೆ. ಯಾರೂ ಮಹಾಮೈತ್ರಿಯನ್ನು ಬಿಟ್ಟು ಹೋಗದಿದ್ದರೆ ಅನುಕೂಲವಾಗುತ್ತದೆ ಎಂದು ಹೇಳಿದರು. ಅಧಿಕಾರಕ್ಕೆ ಬಂದರೆ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ರಾಹುಲ್‍ಗಾಂಧಿ ಹೇಳಿರುವುದರಲ್ಲಿ ತಪ್ಪೇನಿಲ್ಲ. ಈ ಹಿಂದೆ ಮೋದಿ ಸಹ ಹೀಗೇ ಹೇಳಿದ್ದರು. ಈಗ ರಾಹುಲ್ ಅಧಿಕಾರಕ್ಕೆ ಬಂದರೆ ನೀಡುತ್ತೇನೆ ಎಂದಿರಬಹುದು ಎಂದು ಸಿದ್ದರಾಮಯ್ಯ ಹೇಳಿದರು.

Facebook Comments

Sri Raghav

Admin