ಸಾವಿರಾರು ಪ್ರಯಾಣಿಕರ ಜೀವ ಉಳಿಸಿದ ಇಬ್ಬರು ಯುವಕರು..!

ಈ ಸುದ್ದಿಯನ್ನು ಶೇರ್ ಮಾಡಿ

trainಬೆಳಗಾವಿ, ಜ.12-ಚಲಿಸುತ್ತಿದ್ದ ರೈಲಿನ ವಿರುದ್ಧ ಜೀವದ ಹಂಗು ತೊರೆದು ಓಡಿ ಹೋಗಿ ರೈಲು ನಿಲ್ಲಿಸುವ ಮೂಲಕ ಯುವಕರು ಸಂಭವಿಸಬಹುದಾದ ಭಾರೀ ಅನಾಹುತ ತಪ್ಪಿಸಿ ಸಾವಿರಾರು ಪ್ರಯಾಣಿಕರ ಜೀವ ಉಳಿಸಿದ್ದಾರೆ.

ರಿಯಾಜ್ ಹಾಗೂ ತೋಫಿಕ್ ಸಾಹಸ ಮೆರೆದ ಯುವಕರು.  ನಿನ್ನೆ ಸಂಜೆ ಬೆಳಗಾವಿಯ ಖಾನಾಪೂರದ ಗಾಂಧಿ ನಗರದ ರೈಲ್ವೆ ಹಳಿಯಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಕೊಲ್ಹಾಪುರ -ಹೈದರಾಬಾದ್ ರೈಲು ಹುಬ್ಬಳ್ಳಿ ಕಡೆ ಚಲಿಸುತ್ತಿದ್ದ ವೇಳೆ ರೈಲಿನ ಹಳಿ ಮೇಲೆ ಏಕಾಏಕಿ ಮರ ಬಿದ್ದಿದೆ. ಇದೇ ಮಾರ್ಗವಾಗಿ ಬೈಕ್ ಮೇಲೆ ರಿಯಾಜï ಹಾಗೂ ತೋಫಿಕ್ ತೋಟದ ಕಡೆಗೆ ಹೋಗುತ್ತಿದ್ದರು. ಆಗ ಹಳಿ ಮೇಲೆ ಮರ ಬಿದ್ದಿರುವುದನ್ನು ಗಮನಿಸಿದ್ದಾರೆ.

ಈ ವೇಳೆ ಅತ್ತ ದೂರದಲ್ಲಿ ರೈಲು ಬರುವುದನ್ನು ನೋಡಿ ತಕ್ಷಣ ಇಬ್ಬರು ತಮ್ಮ ಶರ್ಟ್ ಬಿಚ್ಚಿ ಹಿಡಿದು ರೈಲಿನ ಮುಂದೆ ಓಡಿ ಅಪಾಯವಿದೆ ಎಂದು ಸೂಚಿಸಿದ್ದಾರೆ. ಇದನ್ನು ನೋಡಿದ ರೈಲು ಸಿಬ್ಬಂದಿ ತಕ್ಷಣ ಬ್ರೇಕ್ ಹಾಕಿದ್ದಾರೆ. ರೈಲು ಸರಿಯಾಗಿ ಮರದ ಹತ್ತಿರವೇ ಬಂದು ನಿಂತಿದೆ. ಒಂದು ವೇಳೆ ಯುವಕರಿಬ್ಬರು ಈ ಸಮಯ ಪ್ರಜ್ಞೆ ಮೆರೆಯದಿದ್ದರೆ ರೈಲಿನಲ್ಲಿದ್ದ ಅಷ್ಟು ಪ್ರಯಾಣಿಕರಿಗೂ ಅಪಾಯವಾಗುವ ಸಾಧ್ಯತೆ ಇತ್ತು.

ಈ ರೈಲಿನಲ್ಲಿ 1,500 ಜನರು ಪ್ರಯಾಣ ಮಾಡುತ್ತಿದ್ದರು. ಯುವಕರ ಈ ಕೆಲಸದಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ.  ರಿಯಾಜ್ ಹಾಗೂ ತೋಫಿಕ್ ಸಾಹಸದ ಬಗ್ಗೆ ನೈಋತ್ಯ ರೈಲ್ವೆ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇವರಿಬ್ಬರಿಗೆ ಶೌರ್ಯ ಪ್ರಶಸ್ತಿ ಕೊಡಬೇಕೆಂದು ಮನವಿ ಮಾಡಿದ್ದಾರೆ.

Facebook Comments