‘ಸಾಲಮನ್ನಾ ವಿಷಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಬೊಗಳೆ ಬಿಡುತ್ತಿದೆ’ : ಬಿಎಸ್‍ವೈ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-vs-Kumaraswamy-

ನವದೆಹಲಿ,ಜ.12- ರೈತರು ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಪಡೆದಿರುವ ಸಾಲಮನ್ನಾ ವಿಷಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಬೊಗಳೆ ಬಿಡುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾಂಕ್‍ಗಳಿಂದ ರೈತರು ಪಡೆದಿರುವ ಸಾಲಮನ್ನಾ ಆಗಲು ಕನಿಷ್ಠ ಇನ್ನು 4 ವರ್ಷ ಬೇಕು.ಸರ್ಕಾರ ಸುಳ್ಳು ಹೇಳಿಕೊಂಡು ರೈತರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂಬರುವ ಬಜೆಟ್‍ನಲ್ಲಿ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಪಡೆದಿರುವ ಸಾಲದ ಹಣವನ್ನು ಸಂಪೂರ್ಣವಾಗಿ ಬ್ಯಾಂಕ್‍ಗೆ ತುಂಬಿಕೊಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳುತ್ತಿದ್ದಾರೆ.

ಮತ್ತೊಂದೆಡೆ ಕಂತುಗಳಲ್ಲಿ ಸಾಲಮನ್ನಾವಾಗಲಿದೆ ಎಂದು ಹೇಳುತ್ತಿದ್ದಾರೆ. ವಾಸ್ತವವಾಗಿ ಇದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂದು ಪ್ರಶ್ನಿಸಿದರು.
ರೈತರ ಸಾಲಮನ್ನಾ ಎಂಬುದೇ ಬಹುದೊಡ್ಡ ವಂಚನೆ.

ಸಾಲಮನ್ನಾ ವಿಷಯದಲ್ಲಿ ಸರ್ಕಾರ ಸುಳ್ಳು ಅಂಕಿ ಅಂಶಗಳನ್ನು ನೀಡುತ್ತಿದೆ. ಈವರೆಗೆ 800 ರೈತರ 500 ಕೋಟಿ ಸಾಲಮನ್ನಾವಾಗಿದೆ. ಅದನ್ನು ಹೊರತುಪಡಿಸಿದರೆ ನಯಾಪೈಸೆಯೂ ಸಾಲಮನ್ನಾವಾಗಿಲ್ಲ ಎಂದು ಹರಿಹಾಯ್ದರು.

ಈಗಲೂ ರಾಜ್ಯದಲ್ಲಿ ಅನ್ನದಾತನ ಆತ್ಮಹತ್ಯೆ ಪ್ರಕರಣಗಳು ನಿಂತಿಲ್ಲ. ಪ್ರತಿದಿನ ಬ್ಯಾಂಕ್ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡುತ್ತಲೇ ಇದ್ದಾರೆ. ಹೊಸದಾಗಿ ಬ್ಯಾಂಕ್‍ನಿಂದ ಸಾಲವೂ ಸಿಗುತ್ತಿಲ್ಲ. ಇದರಿಂದ ಹತಾಶರಾಗಿ ಅನ್ನದಾತ ನೇಣಿಗೆ ಕೊರಳೊಡ್ಡುತ್ತಿದ್ದಾನೆ. ರೈತರಿಗೆ ಅನುಕೂಲವಾಗುವ ಒಂದೇ ಒಂದು ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತಂದಿಲ್ಲ ಎಂದು ಟೀಕಿಸಿದರು.

ನಿನ್ನೆಯಿಂದ ಬಿಜೆಪಿಯ ರಾಷ್ಟ್ರೀಯ ಪರಿಷತ್ ಸಭೆ ಆರಂಭವಾಗಿದೆ. ಪಕ್ಷವನ್ನು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ತರಲು ಕಾರ್ಯತಂತ್ರಗಳನ್ನು ರೂಪಿಸಲಾಗುತ್ತಿದೆ. ಮೊದಲ ದಿನದ ಅಧಿವೇಶನ ಯಶಸ್ವಿಯಾಗಿ ನಡೆದಿದೆ ಎಂದು ಹೇಳಿದರು. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ರೈತರಿಗೆ ಯಾವ ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಿದ್ದಾರೆ ಎಂಬುದು ತಿಳಿದಿಲ್ಲ. ಅನ್ನದಾತನಿಗೆ ಅನುಕೂಲವಗುವ ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡಬೇಕೆಂಬ ಬೇಡಿಕೆ ಇದೆ. ಇದಕ್ಕೆ ಪ್ರಧಾನಿಯಿಂದ ಸಕಾರಾತ್ಮಕ ಸ್ಪಂದನೆ ಸಿಗುವ ನಿರೀಕ್ಷೆಯಿದೆ ಎಂದು ಹೇಳಿದರು.

Facebook Comments

Sri Raghav

Admin