ದೃಶ್ಯಂ ಸಿನಿಮಾ ನೋಡಿ ಮಕ್ಕಳ ಜೊತೆ ಸೇರಿ ಮಹಿಳೆಯನ್ನು ಕೊಂದ ಬಿಜೆಪಿ ನಾಯಕ..!

ಈ ಸುದ್ದಿಯನ್ನು ಶೇರ್ ಮಾಡಿ

Drushyama--01

ಇಂದೋರ್(ಮಧ್ಯಪ್ರದೇಶ), ಜ.13- ಎರಡು ವರ್ಷಗಳ ಹಿಂದೆ 22 ವರ್ಷದ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಮತ್ತು ಆತನ ಮೂವರು ಮಕ್ಕಳೂ ಸೇರಿದಂತೆ ಐವರನ್ನು ಮಧ್ಯಪ್ರದೇಶದ ಇಂದೋರ್ ಪೊಲೀಸರು ಬಂಧಿಸಿದ್ದಾರೆ.

2015ರಲ್ಲಿ ತೆರೆಕಂಡ ಅಜಯ್‍ದೇವಗನ್ ಅಭಿನಯದ ದೃಶ್ಯಂ ಹಿಂದಿ ಚಿತ್ರವೇ ಈ ಕೊಲೆಗೆ ಪ್ರೇರಣೆಯಾಗಿದೆ ಎಂದು ಇಂದೋರ್ ಪೊಲೀಸ್ ಮಹಾ ನಿರೀಕ್ಷಕ(ಡಿಐಜಿ) ಹರಿನಾರಾಯಣಚಾರಿ ತಿಳಿಸಿದ್ದಾರೆ.

ಬಿಜೆಪಿ ಮುಖಂಡ ಜಗದೀಶ್ ಕರೋಟಿಯಾ ಅಲಿಯಾಸ್ ಕಲ್ಲು ಪೆಹಲ್ವಾನ್(65), ಆತನ ಮೂವರು ಮಕ್ಕಳಾದ ವಿಜಯ್(38), ಅಜಯ್(36), ಮತ್ತು ವಿನಯ್(31) ಹಾಗೂ ಅವರ ಸಹಚರರಾದ ನೀಲೇಶ್ ಕಶ್ಯಪ್(28) ಇವರನ್ನು ಟ್ವಿಂಕಲ್ ಡಗ್ರೆ(22) ಎಂಬ ಮಹಿಳೆಯ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದೆ.

ಬನ್‍ಗಂಗಾ ಪ್ರದೇಶದ ನಿವಾಸಿ ಟ್ವಿಂಕ್ ಜಗದೀಶ್ ಕರೋಟಿಯಾ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ತಾನು ಸಹ ಕುಟುಂಬದೊಂದಿಗೆ ನೆಲೆಸುವುದಾಗಿ ಆಕೆ ಪಟ್ಟು ಹಿಡಿದಿದ್ದರು. ಈ ವಿಷಯದಲ್ಲಿ ಆಕೆಯ ಹಠ ಮತ್ತು ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಜಗದೀಶ್ ಮತ್ತು ಅವರ ಪುತ್ರರು ಹತ್ಯೆಗೆ ಸಂಚು ರೂಪಿಸಿದ್ದರು.

ಅದರಂತೆ ಅಕ್ಟೋಬರ್ 16,2016ರಂದು ಟ್ವಿಂಕಲ್‍ನನ್ನು ಉಸಿರುಗಟ್ಟಿಸಿ ಕೊಂದು ಶವವನ್ನು ಸುಟ್ಟು ಹಾಕಿದರು. ಆಕೆಯನ್ನು ಸುಟ್ಟು ಹಾಕಿದ ಸ್ಥಳದಲ್ಲಿ ಬ್ರಾಸ್ಲೆಟ್ ಮತ್ತು ಆಕೆಯ ಕೆಲವು ಕೃತಕ ಆಭರಣಗಳು ಪತ್ತೆಯಾದ ನಂತರ ತೀವ್ರ ತನಿಖೆ ನಡೆಸಿದ ಪೊಲೀಸರು ಜಗದೀಶ್ ಕುಮಾರ್ ಮತ್ತು ಇತರ ನಾಲ್ವರನ್ನು ಬಂಧಿಸಿದರು.

ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಟ್ವಿಂಕಲ್ ಹತ್ಯೆಗೂ ಮುನ್ನ ಈ ಐವರು ದೃಶ್ಯಂ ಸಿನಿಮಾವನ್ನು ಹಲವು ಬಾರಿ ನೋಡಿ ಪೊಲೀಸರಿಗೆ ಸುಳಿವು ಲಭಿಸದಂತೆ ಮಾಡಲು ಕುತಂತ್ರ ರೂಪಿಸಿದ್ದರು.

ಅದರಂತೆ ಆಕೆಯನ್ನು ಕೊಂದು ಶವವನ್ನು ಸುಟ್ಟು ಹಾಕಿ ಪೊಲೀಸರ ದಿಕ್ಕು ತಪ್ಪಿಸಲು ದುಷ್ಟ ಬುದ್ದಿ ಪ್ರದರ್ಶಿಸಿದ್ದರು. ಟ್ವಿಂಕಲ್ ನಾಪತ್ತೆಯಾದ ಬಗ್ಗೆ ದೂರು ದಾಖಲಾದ ನಂತರ ಪೊಲೀಸರು ತೀವ್ರ ತನಿಖೆ ನಡೆಸಿದರು.

ಈ ತನಿಖೆಯ ದಿಕ್ಕು ತಪ್ಪಿಸಲು ಆರೋಪಿಗಳು ಒಂದು ಸ್ಥಳದಲ್ಲಿ ನಾಯಿಯ ಮೃತದೇಹವನ್ನು ಹೂತು ಹಾಕಿ ಇಲ್ಲಿ ಯಾರೋ ಮನುಷ್ಯನ ಶವವನ್ನು ಹೂತ್ತಿದ್ದಾರೆ ಎಂಬ ವದಂತಿ ಸೃಷ್ಟಿಸಿದ್ದರು.

ಪೊಲೀಸರಿಗೆ ವಿಷಯ ತಿಳಿದು ಆ ಸ್ಥಳವನ್ನು ಅಗೆದು ನೋಡಿದಾಗ ಅದರಲ್ಲಿ ನಾಯಿಯ ಅಸ್ಥಿಪಂಜರ ಪತ್ತೆಯಾಗಿತ್ತು. ತನಿಖೆಯ ಜÁಡು ಹಿಡಿದ ಪೊಲೀಸರಿಗೆ ಮತ್ತೊಂದು ಸ್ಥಳದಲ್ಲಿ ಟ್ವಿಂಕಲ್ ಆಭರಣಗಳು ಪತ್ತೆಯಾಗಿ ಕೂಲಂಕಷ ತನಿಖೆ ಕೈಗೊಂಡಾಗ ಅನುಮಾನದ ಮುಳ್ಳು ಜಗದೀಶ್ ಮತ್ತು ಅವರ ಪುತ್ರರತ್ತ ನೆಟ್ಟಿತು.

ಆದರೆ ಸಾಕ್ಷ್ಯಾಧಾರಗಳ ಕೊರತೆ ಹಿನ್ನಲೆಯಲ್ಲಿ ಪೊಲೀಸರು ಅತ್ಯಾಧುನಿಕ ವಿಧಾನದ ಪ್ರತಿತಂತ್ರ ಅನುಸರಿಸಿದರು. ಗುಜರಾತ್ ಪ್ರಯೋಗಾಲಯದಲ್ಲಿ ಬ್ರೈನ್ ಎಲೆಕ್ಟ್ರಿಕಲ್ ಆಸಿಲೇಷನ್ ಸಿಗ್ನೆಚರ್(ಬಿಇಒಎಸ್) ಪರೀಕ್ಷೆಗೆ ಜಗದೀಶ್ ಮತ್ತು ಪುತ್ರರು ಒಳಗಾದಾಗ ಸಿನಿಮೀಯ ರೀತಿಯಲ್ಲಿ ನಡೆದ ಕೊಲೆ ಮತ್ತು ಸಾಕ್ಷ್ಯಾಧಾರ ನಾಶ ಸಂಗತಿ ಬೆಳಕಿಗೆ ಬಂದಿತು.

ಇಂದೋರ್‍ನಲ್ಲಿ ಇದೇ ಮೊದಲ ಬಾರಿಗೆ ಕ್ರಿಮಿನಲ್ ಪ್ರಕರಣದಲ್ಲಿ ಬಿಇಓಎಸ್ ವಿಧಾನ ಅನುಸರಿಸಲಾಗಿದೆ. ಇದನ್ನು ಮೆದುಳು ಬೆರಳಚ್ಚು ಎಂದೂ ಸಹ ಕರೆಯುತ್ತಾರೆ. ಅಪರಾಧ ಶಂಕಿತರನ್ನು ವಿಚಾರಣೆಗೆ ಒಳಪಡಿಸಿ ಮೆದುಳಿನಲ್ಲಿರುವ ನರಗಳ ಮಿಡಿತದ ಆಧಾರದ ಮೇಲೆ ಅವರ ಕೃತ್ಯಗಳನ್ನು ಅತ್ಯಾಧುನಿಕ ವಿಧಾನದ ವಿಚಾರಣೆ ಮೂಲಕ ಬಾಯಿ ಬಿಡಿಸಲಾಗುತ್ತದೆ. ನಂತರ ಐವರನ್ನು ಬಂಧಿಸಲಾಯಿತು.

Facebook Comments

Sri Raghav

Admin