ಅಲ್-ಬದ್ರ್ ಕಮಾಂಡರ್ ಸೇರಿ ಇಬ್ಬರು ಕುಖ್ಯಾತ ಉಗ್ರರು ಖತಂ

ಈ ಸುದ್ದಿಯನ್ನು ಶೇರ್ ಮಾಡಿ

Encounter--01ಶ್ರೀನಗರ, ಜ.13-ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳ ಬೇಟೆ ಕಾರ್ಯಾಚರಣೆಯನ್ನು ಭದ್ರತಾಪಡೆಗಳು ಮತ್ತಷ್ಟು ತೀವ್ರಗೊಳಿಸಿವೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಂ ಜಿಲ್ಲೆಯಲ್ಲಿ ಯೋಧರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಅಲ್ ಬದ್ರ್ ಭಯೋತ್ಪಾದನೆ ಸಂಘಟನೆಯ ಕಮಾಂಡರ್ ಜೀನತ್-ಉಲ್-ಇಸ್ಲಾಂ ಸೇರದಂತೆ ಇಬ್ಬರು ಕುಖ್ಯಾತ ಉಗ್ರರು ಹತರಾಗಿದ್ದಾರೆ.

ಮೃತ ಭಯೋತ್ಪಾದಕರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾಟ್‍ಪೊರಾದಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಇಬ್ಬರು ಕುಪ್ರಸಿದ್ಧ ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ. ಇವರನ್ನು ಜೀನತ್-ಉಲ್-ಇಸ್ಲಾಂ ಮತ್ತು ಶಕೀಲ್ ದರ್ ಎಂದು ಗುರುತಿಸಲಾಗಿದೆ. ಇವರಿಬ್ಬರ ಹಲವಾರು ಭಯೋತ್ಪಾದನೆ ಕೃತ್ಯಗಳಲ್ಲಿ ಶಾಮೀಲಾಗಿದ್ದು, ಬಾಂಬ್ ಮತ್ತು ಸ್ಫೋಟಕಗಳ ತಯಾರಿಕೆಯಲ್ಲಿ ಪರಿಣಿತಿ ಹೊಂದಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಳೆದ ವರ್ಷ ಹಿಜ್‍ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಬಣದಿಂದ ಅಲ್ ಬದ್ರ್‍ಗೆ ಸೇರಿದ್ದ ಜೀನತ್-ಉಲ್-ಇಸ್ಲಾಂ ಎ++ ಶ್ರೇಣಿಯ ಕುಖ್ಯಾತ ಉಗ್ರಗಾಮಿ. ಈತ ಅಲ್ ಬದ್ರ್‍ಗೆ ಸೇರಿದ ನಂತರ ಕಾಶ್ಮೀರದ ವಿವಿಧೆಡೆ ಹಲವು ಭಯೋತ್ಪಾದನೆ ಕೃತ್ಯಗಳು ಹೆಚ್ಚಾಗಿದ್ದವು. ಈಗ 2015ರಿಂದಲೂ ಉಗ್ರಗಾಮಿ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದಾನೆ.

ಉಗ್ರರು ಅವಿತುಕೊಂಡಿರುವ ಖಚಿತ ಸುಳಿವಿನ ಮೇರೆಗೆ ದಕ್ಷಿಣ ಕಾಶ್ಮೀರದ ಕುಲ್ಗಂ ಜಿಲ್ಲೆಯ ಯಾರಿಪೊರಾ ಪ್ರದೇಶದ ಕಾಟ್‍ಪೊರಾದಲ್ಲಿ ನಿನ್ನೆ ರಾತ್ರಿಯಿಂದಲೇ ಯೋಧರು ಕಾರ್ಯಾಚರಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಮರೆಯಿಂದ ಉಗ್ರರು ಯೋಧರತ್ತ ಗುಂಡಿನ ದಾಳಿ ನಡೆಸಿದರು.  ಶರಣಾಗುವಂತೆ ಉಗ್ರಗಾಮಿಗಳಿಗೆ ಸೂಚನೆ ನೀಡಿದ್ದರೂ, ಗುಂಡಿನ ದಾಳಿ ಮುಂದುವರಿಸಿದ್ದರಿಂದ ಎನ್‍ಕೌಂಟರ್ ನಡೆಯಿತು. ಈ ಗುಂಡಿನ ಕಾಳಗದಲ್ಲಿ ಇಬ್ಬರು ಹತರಾದರು ಎಂದು ಪೊಲೀಸ್ ಅಧಿಕಾರಿಗಲು ವಿವರಿಸಿದ್ದಾರೆ.

Facebook Comments