ಅತ್ತ ಲೋಕಸಭೆ ಚುನಾವಣೆಗೆ ಬಿಜೆಪಿ ತಯಾರಿ, ಇತ್ತ ದೋಸ್ತಿಗಳ ಟಿಕೆಟ್ ಫೈಟ್

ಈ ಸುದ್ದಿಯನ್ನು ಶೇರ್ ಮಾಡಿ

BJP-Congress-01

ಬೆಂಗಳೂರು, ಜ.13-ಅತ್ತ ಬಿಜೆಪಿ ಲೋಕಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದರೆ, ಇತ್ತ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಚುನಾವಣೆಗೆ ಸೀಟು ಹಂಚಿಕೆ ಹಗ್ಗ-ಜಗ್ಗಾಟ ಮುಂದುವರೆದಿದೆ.

ಸಮ್ಮಿಶ್ರ ಸರ್ಕಾರ ಬಂದಾಗಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಹಗ್ಗಾಜಗ್ಗಾಟ ಮುಂದುವರೆದೇ ಇತ್ತು. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತಷ್ಟು ತೀವ್ರಗೊಂಡಿದೆ.

28 ಲೋಕಸಭಾ ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳನ್ನು ನಮಗೆ ಬಿಟ್ಟು ಕೊಡಬೇಕೆಂದು ಜೆಡಿಎಸ್ ಕೇಳಿದೆ. ಇದರಲ್ಲಿ ಹಾಲಿ ಕಾಂಗ್ರೆಸ್ ಸಂಸದರಿರುವ 5 ಸ್ಥಾನಗಳನ್ನು ಜೆಡಿಎಸ್ ಕೇಳಿರುವುದು ಕಾಂಗ್ರೆಸ್‍ಗೆ ಇರಿಸು-ಮುರಿಸು ಉಂಟಾಗಿದ್ದು, ಯಾವುದೇ ಕಾರಣಕ್ಕೂ ಹಾಲಿ ಇರುವ ಕ್ಷೇತ್ರಗಳನ್ನು ಬಿಡಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದೆ.

ಕೇಂದ್ರದಲ್ಲಿ ಅತಂತ್ರ ಲೋಕಸಭೆ ನಿರ್ಮಾಣವಾಗುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರದಲ್ಲಿ ಜೆಡಿಎಸ್ ಪಕ್ಷ ಹೆಚ್ಚು ಸೀಟು ಗೆಲ್ಲಬೇಕೆಂಬ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 12 ರಿಂದ 10 ಕ್ಷೇತ್ರಗಳ ಪಾಲು ಕೇಳುತ್ತಿದೆ.

ಹಾಲಿ ಕಾಂಗ್ರೆಸ್ ಸಂಸದರಿರುವ ಕ್ಷೇತ್ರಗಳನ್ನು ಜೆಡಿಎಸ್ ಕೇಳುತ್ತಿರುವುದು ಕಾಂಗ್ರೆಸ್‍ಗೆ ಚಿಂತೆಯ ವಿಷಯವಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಹೊಸ ಪ್ಲ್ಯಾನ್ ರೂಪಿಸಿದ್ದಾರೆ. ಕಾಂಗ್ರೆಸ್ ಗೆಲ್ಲಲು ಕಷ್ಟವಿರುವ 8 ಕ್ಷೇತ್ರಗಳನ್ನು ಬಿಟ್ಟುಕೊಡಲು ಮುಂದಾಗಿದ್ದಾರೆ. ಈ ಪೈಕಿ ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಬೆಂಗಳೂರು ಉತ್ತರ, ಉತ್ತರ ಕನ್ನಡ, ಬೀದರ್ ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟುಕೊಡಲು ನಿರ್ಧರಿಸಿದ್ದಾರೆ.

ಆದರೆ ಜೆಡಿಎಸ್‍ನವರು ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಕ್ಷೇತ್ರಗಳನ್ನೂ ಕೂಡ ಕೇಳುತ್ತಿದ್ದಾರೆ. ಇಲ್ಲಿ ಹಾಲಿ ಕಾಂಗ್ರೆಸ್ ಸಂಸದರಿದ್ದಾರೆ. ಅವರನ್ನು ಕೈ ಬಿಟ್ಟು ಜೆಡಿಎಸ್‍ನವರಿಗೆ ಟಿಕೆಟ್ ಕೊಡುವುದು ಕಷ್ಟವಾಗುತ್ತದೆ. 8 ಕ್ಷೇತ್ರಗಳನ್ನು ಜೆಡಿಎಸ್ ಪಕ್ಷಕ್ಕೆ ನೀಡಬಹುದು. ಈ ಅಂಶವನ್ನು ಹೈಕಮಾಂಡ್ ಗಮನಕ್ಕೂ ಕೂಡ ತರಲಾಗಿದೆ.

ಕಾಂಗ್ರೆಸ್ ಪಕ್ಷದ ವರಿಷ್ಠರ ಈ ಎಂಟೂ ಕ್ಷೇತ್ರಗಳ ಪ್ರಸ್ತಾವನೆಯನ್ನು ದೇವೇಗೌಡರ ಮುಂದಿಡುವ ಸಾಧ್ಯತೆ ಇದೆ. ಆದರೆ ಅದಕ್ಕೆ ಅವರು ಒಪ್ಪಿಕೊಳ್ಳುತ್ತಾರೆ ಎಂಬುದು ಗೊತ್ತಿಲ್ಲ. ಕನಿಷ್ಠ 10 ಕ್ಷೇತ್ರಗಳನ್ನಾದರೂ ನೀಡಬೇಕೆಂಬುದು ಜೆಡಿಎಸ್‍ನ ಷರತ್ತಾಗಿದೆ. ಈ ಹಗ್ಗಾ-ಜಗ್ಗಾಟದಲ್ಲಿ ಯಾರ ಕೈ ಮೇಲಾಗಲಿದೆ ಎಂಬುದನ್ನು ಕಾದು ನೋಡಬೇಕು.

Facebook Comments

Sri Raghav

Admin