ಚಿಕ್ಕಮಗಳೂರು ಕಾರಾಗೃಹದಲ್ಲಿ ಸುಗ್ಗಿ ಹಬ್ಬ

ಈ ಸುದ್ದಿಯನ್ನು ಶೇರ್ ಮಾಡಿ

CKMಚಿಕ್ಕಮಗಳೂರು, ಜ.13- ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಮತ್ತು ತಾಲ್ಲೂಕು ಘಟಕದ ವತಿಯಿಂದ ನಗರದ ಜಿಲ್ಲಾ ಕಾರಾಗೃಹದಲ್ಲಿ ನಡೆದ ಸುಗ್ಗಿ ಹಬ್ಬದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ ಕೈದಿಗಳನ್ನು ರಂಜಿಸಿತು.

ಗಾಯಕರಾದ ಬಕ್ಕೀ ಮಂಜುನಾಥ್ ಮತ್ತು ನವೀನ್ ತಮ್ಮ ಕಂಚಿನ ಕಂಠದಲ್ಲಿ ಗೀಗೀ ಪದ, ಚೌಡಿಕೆ ಪದ, ತತ್ವಪದ ಸೇರಿದಂತೆ ಜಾನಪದದ ವಿವಿಧ ಪ್ರಾಕಾರಗಳನ್ನು ಹಾಡುವ ಮೂಲಕ ಕೈದಿಗಳ ಮನಗೆದ್ದರು.

ಜಾನಪದದ ಒಗಟುಗಳನ್ನು ಹಾಡಿ ಅವುಗಳನ್ನು ಕೈದಿಗಳಿಂದ ಬಿಡಿಸುವ ಮೂಲಕ ರಂಜಿಸಿದರು, ನವಿರು ಹಾಸ್ಯದೊಂದಿಗೆ ಕಾರಾಗೃಹದಲ್ಲಿ ನಗೆಯ ಬುಗ್ಗೆಯನ್ನು ಎಬ್ಬಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್, ಕೈದಿಗಳಿಗೆ ಜಾನಪದ ಗೀತೆಗಳನ್ನು ಕಲಿಸುವ ನಿಟ್ಟಿನಲ್ಲಿ ಸದ್ಯದಲ್ಲೇ ಕಾರಾಗೃಹದಲ್ಲಿ ಪರಿಷತ್ತಿನಿಂದ ತರಬೇತಿ ಕಾರ್ಯಾಗಾರ ನಡೆಸಲಾಗುವುದು ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕಿನ ನಿರ್ದೇಶಕ ಎಂ.ಸಿ.ಶಿವಾನಂದ ಸ್ವಾಮಿ, ಬಂಧೀಖಾನೆ ಸಹಾಯಕ ಅಧೀಕ್ಷಕ ರಾಕೇಶ್ ಕಾಂಬ್ಳೆ, ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಿ.ಆರ್.ಜಗಧೀಶ್, ಉದ್ಯಮಿ ರವಿಸಿಂಗ್, ವರದರಾಜು, ಕಾರಾಗೃಹದ ವೀಕ್ಷಕ ಉಮೇಶ್ ಚಂದ್ ನಾಯಕ್ ಉಪಸ್ಥಿತರಿದ್ದರು.

Facebook Comments