ರಾಜ್ಯ ರಾಜಕೀಯದ ಸಂ’ಕ್ರಾಂತಿ’ ಬಗ್ಗೆ ಬಿಎಸ್ವೈ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-Yaddyurappa

ನವದೆಹಲಿ,ಜ.13- ಕಾಂಗ್ರೆಸ್‍ನಲ್ಲಿ ಅತೃಪ್ತ ಶಾಸಕರ ಯಾರಿದ್ದಾರೆ ಎಂಬುದನ್ನು ನೀವು (ಮಾಧ್ಯಮದವರು) ಹೇಳಿದರೆ ಖುದ್ದು ನಾನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

ದೆಹಲಿಗೆ ಬಂದಿರುವ ಕಾಂಗ್ರೆಸ್ ಶಾಸಕರ ಒಬ್ಬೇ ಒಬ್ಬ ಶಾಸಕರ ಹೆಸರನ್ನು ನೀವು ಹೇಳಿಬಿಡಿ. ಅವರು ಎಲ್ಲೇ ಇದ್ದರೂ ನಾನೇ ಭೇಟಿಯಾಗುತ್ತೇನೆ. ಊಹಾಪೋಹ, ಅಂತೆಕಂತೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬಿಎಸ್‍ವೈ ಗರಂ ಆಗಿಯೇ ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ತಮ್ಮಲ್ಲಿರುವ ತಪ್ಪುಗಳನ್ನು ಮುಚ್ಚಿ ಹಾಕಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ನಾಯಕರು ವ್ಯವಸ್ಥಿತವಾಗಿ ಬಿಜೆಪಿ ಮೇಲೆ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಅವರೇ ಹಾದಿಬೀದಿಯಲ್ಲಿ ಕಿತ್ತಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ನಾವೇನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಸಂಕ್ರಾಂತಿ ನಂತರ ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತವೆ ಎಂಬ ಮಾಧ್ಯಮದವರ ಪ್ರಶ್ನೆಗೆ ಯಾವಾಗ ಏನಾಗುತ್ತದೆ ಎಂಬುದನ್ನು ಹೇಳಲು ನಾನೇನು ಭವಿಷ್ಯಕಾರನಲ್ಲ. ಸದ್ಯದ ಪರಿಸ್ಥಿತಿ ನೋಡಿದರೆ ಈ ಸರ್ಕಾರ ಹೆಚ್ಚು ದಿನ ಮುಂದುವರೆಯುವ ಲಕ್ಷಣಗಳಿಲ್ಲ. ನಾವು ಪ್ರತಿಪಕ್ಷವಾಗಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಸಂಕ್ರಾಂತಿ ಬಳಿಕವೋ ಅಥವಾ ಯುಗಾದಿ ನಂತರವೋ ಶುಭ ಸುದ್ದಿ ಬಿಜೆಪಿಗೆ ಸಿಗಲಿದೆ ಎಂಬುದು ಕೇವಲ ವದಂತಿ. ಯಾವುದೇ ಕಾರಣಕ್ಕೂ ನಾವು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುವುದಿಲ್ಲ. ನಾವು ಅತಿಹೆಚ್ಚು ಶಾಸಕರನ್ನು ಹೊಂದಿರುವುದರಿಂದ, ಅಂತಹ ಪರಿಸ್ಥಿತಿ ಬಂದರೆ ಮುಂದೆ ನೊಡೋಣ ಎಂದು ಮಾರ್ಮಿಕವಾಗಿ ನುಡಿದರು.

ಬರಲಿರುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಗಳಿಸಲು ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ಶಾಸಕರು, ವಿಧಾನಪರಿಷತ್ ಸದಸ್ಯರು, ಪದಾಧಿಕಾರಿಗಳು, ಸಾಮಾಜಿಕ ಜಾಲತಾಣ ಮುಖ್ಯಸ್ಥರು, ವಕ್ತಾರರಿಗೆ ಸಲಹೆಗಳನ್ನು ನೀಡಲಿದ್ದಾರೆ.

ರಾಜ್ಯದಲ್ಲಿ ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ಗೆಲ್ಲಲು ನಮ್ಮದೇ ಆದ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳುತ್ತಿದ್ದೇವೆ. ವರಿಷ್ಠರು ನೀಡುವ ಸಲಹೆ, ಮಾರ್ಗದರ್ಶನಗಳನ್ನು ಪಾಲಿಸಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರುವುದು ನಮ್ಮ ಉದ್ದೇಶ.

ಸದ್ಯಕ್ಕೆ ನಮ್ಮ ಮುಂದೆ ಲೋಕಸಭೆ ಚುನಾವಣೆ ಗೆಲ್ಲುವುದು ಏಕೈಕ ಗುರಿ. ಉಳಿದ ಬೆಳವಣಿಗೆಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಇಂದು ನಮ್ಮ ಕಾರ್ಯಕ್ರಮ ಮುಗಿದರೆ ಬೆಂಗಳೂರಿಗೆ ತೆರಳುತ್ತೇನೆ ಎಂದು ಬಿಎಸ್‍ವೈ ಹೇಳಿದರು.

# ಸುಖಾಸುಮ್ಮನೆ ಮಾತನಾಡಿಲ್ಲ:
ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಯಾವುದೇ ರೀತಿಯ ಅಪಮಾನವಾಗುವ ರೀತಿಯಲ್ಲಿ ಮಾತನಾಡಿಲ್ಲ. ಖುದ್ದು ಕುಮಾರಸ್ವಾಮಿ ಅವರೇ ಕಾಂಗ್ರೆಸಿಗರು ನನ್ನನ್ನು ಕ್ಲರ್ಕ್ ರೀತಿ ನೋಡುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ಹೇಳಿದ್ದಾರೆ.

ಪ್ರಧಾನಿಯವರು ಯಾವ ಕಾರಣಕ್ಕಾಗಿ ಈ ಮಾತನ್ನು ಹೇಳಿದ್ದಾರೆ ಎಂಬುದನ್ನು ಕುಮಾರಸ್ವಾಮಿ ಮತ್ತು ಕಾಂಗ್ರೆಸಿಗರು ಅರ್ಥಮಾಡಿಕೊಳ್ಳಬೇಕು. ಆಧಾರರಹಿತವಾಗಿ ಇನ್ನೊಬ್ಬರ ಮೇಲೆ ಮೋದಿ ಎಂದೂ ಆರೋಪ ಮಾಡುವುದಿಲ್ಲ. ಅವರೇನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯೇ ಎಂದು ವ್ಯಂಗ್ಯವಾಡಿದರು.

ಸಮ್ಮಿಶ್ರ ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಆಧಾರದ ಮೇಲಿಯೇ ಮಾತನಾಡಿದ್ದಾರೆ. ಈ ಸತ್ಯವನ್ನು ಕುಮಾರಸ್ವಾಮಿ ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸಿಗರು ಹೆಣೆದಿರುವ ಬಲೆಯಲ್ಲಿ ಒಂದಲ್ಲೊಂದು ದಿನ ನೀವು ಸಿಲುಕಿಕೊಳ್ಳುವುದು ಖಚಿತ ಎಂದು ಬಿಎಸ್‍ವೈ ಎಚ್ಚರಿಸಿದರು.

Facebook Comments

Sri Raghav

Admin