ಚುನಾವಣೆ ಅಧಿಕೃತ ಘೋಷಣೆ ಇಲ್ಲದಿದ್ದರೂ ಭರ್ಜರಿ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

bangarpetಬಂಗಾರಪೇಟೆ, ಜ.14- ಸ್ಥಳೀಯ ಸಂಸ್ಥೆಗಳಿಗೆ ಅಧಿಕೃತವಾಗಿ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಣೆ ಮಾಡದೇ ಇದ್ದರೂ, ಪುರಸಭೆ ಚುನಾವಣೆಗೆ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆದುಕೊಳ್ಳಲು ಈಗಿನಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ.

ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ಪುರಸಭೆ ಆಡಳಿತ ಕಾಂಗ್ರೆಸ್ ವಶದಲ್ಲಿದ್ದು, ಬೇರೆ ಪಕ್ಷಗಳಲ್ಲಿ ಎಷ್ಟೇ ಘಟಾನುಘಟಿ ನಾಯಕರಿದ್ದರೂ ಕಾಂಗ್ರೆಸ್ ವಶದಿಂದ ಪುರಸಭೆ ಆಡಳಿತವನ್ನು ಕಿತ್ತುಕೊಳ್ಳಲು ಸಾಧ್ಯವಾಗಲಿಲ್ಲ. ಆಗಾಗಿ ಇಲ್ಲಿನ ಪುರಸಭೆ ಚುನಾವಣೆಗೆ ಕೈ ಮುಂದಿದೆ ಎನ್ನಬಹುದು.

ಈ ಬಾರಿ ನಡೆಯಲಿರುವ ಪುರಸಭೆ ಚುನಾವಣೆಯಲ್ಲಿ 4 ವಾರ್ಡ್‍ಗಳು ಹೆಚ್ಚಿಗೆ ಸೇರಿಸಿರುವುದರಿಂದ 23 ರಿಂದ 27 ವಾರ್ಡ್‍ಗಳ ಸಂಖ್ಯೆ ಹೆಚ್ಚಿಸಿಕೊಂಡಿದೆ. ಎಲ್ಲಾ 27 ವಾರ್ಡ್‍ಗಳಿಗೆ ಈಗಾಗಲೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದ ಪಡಿಸಿಕೊಂಡು ಚುನಾವಣಾ ರಂಗಕ್ಕೆ ದುಮುಕಲು ಎಲ್ಲಾ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಪ್ರತಿ ವಾರ್ಡ್‍ಗೆ ಭೇಟಿ ನೀಡುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ಪಕ್ಷಕ್ಕೆ ಶಕ್ತಿ ತುಂಬಲು ಮನೆ ಮನೆಗೆ ಭೇಟಿ ನೀಡಿ ಆಧಾರ್‍ಕಾರ್ಡ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಮೂಲಕ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಜತೆಗೆ ಅಭ್ಯರ್ಥಿಗಳ ಬಗ್ಗೆಯೂ ಪ್ರಚಾರ ಮಾಡುತ್ತಿದ್ದಾರೆ. ಪ್ರತಿ ವಾರ್ಡ್‍ನಲ್ಲಿ ಪಕ್ಷದಲ್ಲಿ ಮೂರಕ್ಕೂ ಹೆಚ್ಚು ಮಂದಿ ಟಿಕೆಟ್ ಆಕಾಂಕ್ಷಿಗಳು ಹುಟ್ಟಿಕೊಂಡಿರುವುದರಿಂದ, ತಮಗೆ ಬೇಕಾದ ಅಭ್ಯರ್ಥಿ ಪರವಾಗಿ ವಾರ್ಡ್‍ನಲ್ಲಿ ಅವರವರ ಬೆಂಬಲಿಗರು ಪ್ರಚಾರಕ್ಕೆ ಇಳಿದಿರುವುದು ಇತರೆ ಆಕಾಂಕ್ಷಿಗಳಲ್ಲಿ ಅಸಮಧಾನಕ್ಕೂ ಕಾರಣವಾಗುತ್ತಿದೆ. ಕೊನೆಗಳಿಗೆಯಲ್ಲಿ ಅಧಿಕೃತ ಅಭ್ಯರ್ಥಿಗೆ ಬೆಂಬಲಕ್ಕೆ ಇತರೆ ಆಕಾಂಕ್ಷಿಗಳಿ ನಿಂತುಕೊಂಡರೂ ಆಶ್ಚರ್ಯ ಪಡುವಂತಿಲ್ಲ.

ಈಗಾಗಲೆ ಕಾಂಗ್ರೆಸ್ ಪಕ್ಷ ಪುರಸಭೆ ಚುನಾವಣೆಯ ದೃಷ್ಟಿಯಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಿ ಚುನಾವಣೆ ಎದುರಿಸಲು ಸಜ್ಜಾಗಿ ನಿಂತಿದ್ದರೆ ಬಿಜೆಪಿ ಮತ್ತು ಜೆಡಿಎಸ್ ತಟಸ್ಥವಾಗಿರುವುದರಿಂದ ಕಾಂಗ್ರೆಸ್‍ಗೆ ಕೌಂಟರ್ ನೀಡಲು ಯಾವ ರೀತಿ ಸಿದ್ಧತೆ ಮಾಡಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Facebook Comments