ಬಿಜೆಪಿ ರಣತಂತ್ರ, ಕ್ಷೇತ್ರ ಬದಲಿಸುವರೇ ಡಿವಿಎಸ್, ಶೋಭಾ ಮತ್ತು ಪ್ರತಾಪ್ ಸಿಂಹ..?

ಈ ಸುದ್ದಿಯನ್ನು ಶೇರ್ ಮಾಡಿ

Pratap-Simha--BJP
ಬೆಂಗಳೂರು,ಜ.14- ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದ ಹಾಗೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಲು ಪ್ರಾರಂಭವಾಗಿದೆ. ಎಲ್ಲ ಪಕ್ಷಗಳು ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿವೆ.

ಕೆಲ ಬಿಜೆಪಿ ಸಂಸದರು ಸೋಲು ಗೆಲುವಿನ ಸಮೀಕರಣದೊಂದಿಗೆ ಕ್ಷೇತ್ರ ಬದಲಾವಣೆಗೂ ಮುಂದಾಗಿದ್ದಾರೆ. ಈ ಪೈಕಿ ಕೇಂದ್ರ ಸಚಿವ ಸದಾನಂದಗೌಡ ಕ್ಷೇತ್ರ ಬದಲಾವಣೆಗೆ ಗಮನಹರಿಸಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಕೇಂದ್ರ ಸಚಿವ ಸದನಂದಗೌಡರು ಸದ್ಯ ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂದಿನ ಲೋಕಸಭೆ ಚುನಾವಣೆ ಹಿನ್ನಲೆ ಸೋಲು-ಗೆಲುವಿನ ಲೆಕ್ಕಾಚಾರವನ್ನು ಪ್ರಾರಂಭಿಸಿರುವ ಸದಾನಂದ ಗೌಡರು, ಕ್ಷೇತ್ರ ಬದಲಾವಣೆಯ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಉತ್ತರದಲ್ಲಿ ಮುಂದಿನ ಚುನಾವಣೆಯಲ್ಲಿ ಗೆಲುವು ಕಷ್ಟ ಸಾಧ್ಯವಾಗಿದ್ದು, ಜತೆಗೆ ಒಂದು ವೇಳೆ ಜೆಡಿಎಸ್ ವರಿಷ್ಠ ದೇವೇಗೌಡರು ಬೆಂಗಳೂರು ಉತ್ತರದಲ್ಲಿ ನಿಂತರೆ, ಗೆಲುವಿನ ನಗೆ ಬೀರುವುದು ಕಷ್ಟ ಎಂಬುದನ್ನು ಮನಗಂಡಿರುವ ಸದಾನಂದ ಗೌಡರು ತಮ್ಮ ಮೊದಲ ಆಯ್ಕೆಯಾಗಿ ಉಡುಪಿ, ಚಿಕ್ಕಮಗಳೂರಿನತ್ತ ಕಣ್ಣಿಟ್ಟಿದ್ದಾರೆಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಅದು ಸಾಧ್ಯವಾಗದೇ ಇದ್ದರೆ, ಎರಡನೇ ಆಯ್ಕೆಯಾಗಿ ಮೈಸೂರು ಕ್ಷೇತ್ರದಿಂದ ಕಣಕ್ಕಿಳಿಯುವ ಯೋಚನೆ ಮಾಡಿದ್ದಾರೆ ಎಂದೂ ಕೂಡ ಹೇಳಲಾಗಿದೆ.

# ಕರಂದ್ಲಾಜೆ ಕ್ಷೇತ್ರ ಬದಲಾವಣೆ ಕ್ಷೇತ್ರ:
ಇತ್ತ ಸಂಸದೆ ಶೋಭಾ ಕರಂದ್ಲಾಜೆ ಕೂಡ ಕ್ಷೇತ್ರ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಬದಲು ಬೆಂಗಳೂರು ಉತ್ತರದತ್ತ ಮುಖ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಆದರೆ, ಪಕ್ಷದ ವರಿಷ್ಠರು ಹಾಲಿ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಶೋಭಾ ಕರಂದ್ಲಾಜೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವತ್ತ ಒಲವು ಹೊಂದಿಲ್ಲ ಎನ್ನಲಾಗುತ್ತಿದೆ.

ಆದರೆ ಪಕ್ಷದ ವರಿಷ್ಠರು ಸ್ಪರ್ಧಿಸುವಂತೆ ಸೂಚಿಸಿರುವುದರಿಂದ ಬೆಂಗಳೂರು ಉತ್ತರದಿಂದ ಕಣಕ್ಕಿಳಿಯುವ ಒಲವನ್ನು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

# ಪ್ರತಾಪ್ ಸಿಂಹಗೆ ಯಾವ ಕ್ಷೇತ್ರ:
ಇತ್ತ ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹರ ಕ್ಷೇತ್ರ ಬದಲಾವಣೆಯ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಮಟ್ಟದ ಕೆಲ ನಾಯಕರು ಹಾಗೂ ಆರ್‍ಎಸ್‍ಎಸ್ ಮುಖಂಡರು ಪ್ರತಾಪ್ ಸಿಂಹ ಅವರನ್ನು ಮತ್ತೊಮ್ಮೆ ಮೈಸೂರು ಕೊಡಗು ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಪ್ರತಾಪ್ ಸಿಂಹರ ಕ್ಷೇತ್ರ ಬದಲಾವಣೆಯ ಸಾಧ್ಯತೆಯನ್ನು ತಳ್ಳಿಹಾಕುವ ಹಾಗಿಲ್ಲ.

Facebook Comments

Sri Raghav

Admin