ನಮ್ಮನ್ನು’ಥರ್ಡ್ ಗ್ರೇಡ್ ನಾಗರಿಕರಂತೆ ಕಾಣಬೇಡಿ : ಕಾಂಗ್ರೆಸ್‍ಗೆ ಎಚ್‍ಡಿಕೆ ತಾಕೀತು

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--01ಬೆಂಗಳೂರು (ಪಿಟಿಐ), ಜ .14- ಮುಂಬರುವ ಲೋಕಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್- ಜಾತ್ಯಾತೀತ ಜನತಾದಳ ದೋಸ್ತಿ ಸರ್ಕಾರದಲ್ಲಿ ಸ್ಥಾನ ಹಂಚಿಕೆ ಕುರಿತ ಗೊಂದಲ- ವಿವಾದಗಳು ಮುಂದುವರೆದಿರುವಾಗಲೇ ಈ ವಿಷಯದಲ್ಲಿ ಜೆಡಿಎಸ್‍ನನ್ನು ಮೂರನೇ ದರ್ಜೆ ನಾಗರಿಕರನ್ನಾಗಿ ನೋಡದಂತೆ ಕೈ ನಾಯಕರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಾಕೀತು ಮಾಡಿದ್ದಾರೆ.

ತಮ್ಮ ಪಕ್ಷವನ್ನು ಕಾಂಗ್ರೆಸ್ ಗೌರವದಿಂದ ಕಾಣಬೇಕು. ನಾವು ತೃತೀಯ ದರ್ಜೆ ಮನುಷ್ಯರಲ್ಲ. ಸೀಟು ಹಂಚಿಕೆಯಲ್ಲಿ ಜೆಡಿಎಸ್‍ನನ್ನು ಥರ್ಡ್ ಗ್ರೇಡ್ ಸಿಟಿಜನ್ ರೀತಿ ಪರಿಗಣಿಸ ಬಾರದು.

ಎರಡೂ ಪಕ್ಷಗಳು ಕೊಡು ಮತ್ತು ಪಡೆಯುವ ನೀತಿಯನ್ನು ಅನುಸರಿಸಿ ಸಮನ್ವಯತೆಯಿಂದ ಬಿಜೆಪಿ ವಿರುದ್ಧ ಹೋರಾಡಬೇಕು ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಕರೆ ನೀಡಿದ್ದಾರೆ. ಸುದ್ದಿ ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ನೇತೃತ್ವದ ಎನ್‍ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದರು.

ಮೋದಿ ಅವರ ವರ್ಚಸ್ಸು ದಿನೇ ದಿನೇ ಕುಂಠಿತವಾಗುತ್ತಿದೆ. ಅವರ ಪಕ್ಷದಲ್ಲೇ ಅಸಹಿಷ್ಣುತೆ ಮತ್ತು ಅಸಮಾಧಾನ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿಯನ್ನಾಗಿ ಆ ಪಕ್ಷವು ಬಿಂಬಿಸುತ್ತಿದೆ.

ಆದರೆ ಬಿಜೆಪಿ ವಿರುದ್ಧವಾಗಿರುವ ಪಕ್ಷಗಳು ರಾಹುಲ್ ಅವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿ ಯನ್ನಾಗಿ ಸ್ವೀಕರಿಸಲು ಸಮ್ಮತಿಸಿಲ್ಲ ಎಂಬ ಅಂಶವನ್ನೂ ಸಹ ಎಚ್‍ಡಿಕೆ ತಿಳಿಸಿದರು.ಕಾಂಗ್ರೆಸ್-ಜೆಡಿಎಸ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಗ್ಗೂಡಿ ಸ್ಪರ್ಧಿಸಬೇಕೆಂಬುದು ನಮ್ಮಅಭಿಪ್ರಾಯ. ಬಿಜೆಪಿ ಅಧಿಕಾರಕ್ಕ ಬರು ವುದನ್ನು ತಪ್ಪಿಸುವ ಉದ್ದೇಶದಿಂದಲೇ ಕರ್ನಾಟಕದಲ್ಲಿ ಈ ಎರಡು ಪಕ್ಷಗಳು ಒಗ್ಗೂಡಿ ಸರ್ಕಾರ ರಚಿಸಿವೆ.

ಅದೇ ರೀತಿ ಕೇಂದ್ರದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಮತ್ತು ದೇಶದ ಪರಿಸ್ಥಿತಿ ಸುಧಾರಿಸಲು ಈ ಎರಡೂ ಪಕ್ಷಗಳು ಸಮನ್ವಯತೆಯಿಂದ ಹೊಂದಾಣಿಕೆ ಮಾಡಿಕೊಂಡು ಸಾರ್ವತ್ರಿಕ ಚುನಾವಣೆಯನ್ನು ಎದುರಿಸುವುದು ಅನಿವಾರ್ಯ ಎಂದು ಕುಮಾರಸ್ವಾಮಿ ಪ್ರತಿಪಾದಿಸಿದರು.

Facebook Comments