ಕಾಂಗ್ರೆಸ್’ಗೆ ದಿಢೀರ್ ಉಪಹಾರ ಕೂಟದ ಹಿಂದಿದೆ ‘ಆಪರೇಷನ್’ ಭೀತಿ..!

ಈ ಸುದ್ದಿಯನ್ನು ಶೇರ್ ಮಾಡಿ

Congresss

ಬೆಂಗಳೂರು, ಜ.14- ಆಪರೇಷನ್ ಕಮಲ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಕಾಂಗ್ರೆಸ್‍ನ ಎಲ್ಲಾ ಸಚಿವರು ಇಂದು ಉಪಹಾರ ಕೂಟ ನಡೆಸಿ ಪ್ರಸ್ತುತ ರಾಜಕೀಯ ವಿದ್ಯಾಮಾನಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಬಿಜೆಪಿ ಶಾಸಕರು ಬೀಡುಬಿಟ್ಟಿರುವುದು ಅದರ ಬೆನ್ನ ಹಿಂದೆಯೇ ಒಂದರ ಮೇಲೊಂದರಂತೆ ಸಭೆ ನಡೆಸುತ್ತಿರುವುದು ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ, ನಾಗೇಂದ್ರ, ಉಮೇಶ್ ಜಾದವ್, ಶಿವರಾಮ್ ಹೆಬ್ಬಾರ್ ಸೇರಿದಂತೆ ಕೆಲವು ಶಾಸಕರು ನಾಪತ್ತೆಯಾಗಿರುವುದು ಸಮ್ಮಿಶ್ರ ಸರ್ಕಾರವನ್ನು ಗಲಿಬಿಲಿಗೊಳಿಸಿದೆ.

ಈಗಾಗಲೇ ಎರಡು ಬಾರಿ ಆಪರೇಷನ್ ಕಮಲಕ್ಕೆ ಯತ್ನಿಸಿ ವಿಫಲವಾದ ಬಿಜೆಪಿ ಮೂರನೇ ಬಾರಿಯೂ ಯಶಸ್ವಿಯಾಗುವುದಿಲ್ಲ ಎಂದು ಧೈರ್ಯವಾಗಿದ್ದ ಕಾಂಗ್ರೆಸ್ ನಾಯಕರಿಗೆ ಚಳಿಜ್ವರ ಬಂದಂತಾಗಿದೆ.

ಕಾಂಗ್ರೆಸ್‍ನ ಕೆಲವು ಶಾಸಕರು ಸಂಪರ್ಕಕ್ಕೆ ಸಿಗದೆ ನೇರವಾಗಿ ಬಿಜೆಪಿ ನಾಯಕರ ಜತೆ ಮಾತುಕತೆ ನಡೆಸಿರುವುದು ಒಂದೆಡೆಯಾದರೆ, ನಾವು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ಪಕ್ಷದಲ್ಲೇ ಉಳಿಯುತ್ತೇವೆ ಎಂದು ನಂಬಿಸುತ್ತಲೇ ಮತ್ತೊಂದೆಡೆ ಬಿಜೆಪಿಯ ಆಪರೇಷನ್ ಕಮಲದತ್ತ ಒಲವು ತೋರಿರುವ ಶಾಸಕರು ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದ್ದಾರೆ.

ನಿನ್ನೆವರೆಗೂ ಧೈರ್ಯವಾಗಿದ್ದ ಕಾಂಗ್ರೆಸ್ ಪಾಳಯದಲ್ಲಿ ಇದ್ದಕ್ಕಿದ್ದಂತೆ ಗೊಂದಲಗಳು ಕಾಣಿಸಿಕೊಳ್ಳಲು ಆರಂಭಿಸಿವೆ. ಕೆಲವು ಶಾಸಕರು ಯಾರ ಸಂಪರ್ಕಕ್ಕೂ ಸಿಗದೆ ದಿಢೀರ್ ನಾಪತ್ತೆಯಾಗಿದ್ದಾರೆ. ಬಹುತೇಕ ಶಾಸಕರು ಮುಂಬೈನಲ್ಲಿದ್ದು, ಇಂದು ಸಂಜೆಯೊಳಗೆ ದೆಹಲಿಗೆ ಹೋಗಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡುವ ನಿರೀಕ್ಷೆಗಳಿವೆ.

Congresss-3

ಇಂದು ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಕಾಂಗ್ರೆಸ್ ಸಚಿವರ ಸಭೆಯಲ್ಲಿ ಆಪರೇಷನ್ ಕಮಲ ಮತ್ತು ಸರ್ಕಾರ ಪತನಗೊಳಿಸುವ ಬಿಜೆಪಿಯ ಪ್ರಯತ್ನದ ಬಗ್ಗೆ ತೀವ್ರ ಆಕ್ರೋಶ ಉಂಟಾಗಿದೆ.

ಬಿಜೆಪಿ ತಂತ್ರಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪ್ರತಿಭಟನಾ ಮಾರ್ಗ ಹಿಡಿಯಬೇಕು. ನಾಪತ್ತೆಯಾಗಿರುವ ಶಾಸಕರನ್ನು ಹುಡುಕಿ ಕರೆತರಲು ಬಲವಾದ ತಂಡ ರಚಿಸಬೇಕೆಂಬ ವಿಷಯಗಳು ಚರ್ಚೆಯಾಗಿವೆ.

Congresss-1

ಬಿಜೆಪಿಗೆ ಹೊರಟಿರುವ ಬಹುತೇಕ ಶಾಸಕರು ತಮ್ಮ ರಾಜಕೀಯ ಭವಿಷ್ಯದ ಅವನತಿ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಯಾವ ತಂತ್ರಗಾರಿಕೆ ರೂಪಿಸುತ್ತಿದೆ ಎಂಬುದು ಗೊತ್ತಿಲ್ಲ. ಶಾಸಕರಿಂದ ರಾಜೀನಾಮೆ ಕೊಡಿಸಲಿದೆಯೋ ಅಥವಾ ಶಾಸಕರು ಅಧಿವೇಶನದಿಂದ ದೂರ ಉಳಿದು ಸರ್ಕಾರದ ಪತನಕ್ಕೆ ಕಾರಣರಾಗುತ್ತಾರೋ ಯಾವುದೂ ಸ್ಪಷ್ಟವಾಗಿ ಗೊತ್ತಿಲ್ಲದೇ ಇರುವುದರಿಂದ ಕಾಂಗ್ರೆಸ್ ಸಚಿವರು ಕಕ್ಕಾಬಿಕ್ಕಿಯಾಗಿದ್ದಾರೆ ಎನ್ನಲಾಗಿದೆ.

Congresss-4

Facebook Comments

Sri Raghav

Admin