ಜನರ ಮನೆಬಾಗಿಲೇ ಉದ್ಯೋಗ ಒದಗಿಸಲಾಗುವುದು: ಶಿವಶಂಕರ್ ರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

tumkurತುಮಕೂರು,ಜ.13-ರಾಜ್ಯದಲ್ಲಿ ಸುಮಾರು 12 ಜಿಲ್ಲೆಗಳಲ್ಲಿ ಮುಂಗಾರು ಮತ್ತು ಹಿಂಗಾರಿನಲ್ಲಿ ಮಳೆ ಕೊರತೆಯಿಂದ ಶೇ.70ರಷ್ಟು ಬೆಳೆ ನಷ್ಟವಾಗಿದೆ. ಜನರಿಗೆ ಕೆಲಸವಿಲ್ಲದಂತಾಗಿದೆ. ಇದನ್ನು ಸರಿದೂಗಿಸಲು ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಳಲ್ಲಿ ಜನರ ಮನೆ ಬಾಗಿಲಿಗೇ ಉದ್ಯೋಗ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಸಚಿವ ಶಿವಶಂಕರ್ ರೆಡ್ಡಿ ತಿಳಿಸಿದರು.

ಕರ್ನಾಟಕ ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಅಧ್ಯಯನ ನಡೆಸಲು ನೇಮಕಗೊಂಡಿರುವ ಸಚಿವರ ಸಚಿವ ಸಂಪುಟದ ಉಪ ಸಮಿತಿ ತುಮಕೂರು ಜಿಲ್ಲೆಗೆ ಭೇಟಿ ನೀಡಿ ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ ನಡೆಸಿದ ವೇಳೆ ಅವರು ಮಾತನಾಡಿದರು.

ನೀರಾವರಿ ಇರುವ ರೈತರಿಗೆ ವಿತರಿಸಿದ್ದ ಮೇವಿನ ಕಿಟ್‍ಗಳನ್ನು ಉಪಯೋಗಿಸಿ ಜೋಳ ಮತ್ತಿತರರ ಮೇವುಗಳನ್ನು ಬೆಳೆದಿದ್ದು, ಸದ್ಯ ಮೇವಿನ ಕೊರತೆ ಉಂಟಾಗಿಲ್ಲ ಈ ಬಗ್ಗೆ ಜಿಲ್ಲಾಡಳಿತ ಉತ್ತಮ ಕೆಲಸ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬೈರನಹಳ್ಳಿ ಕ್ರಾಸ್‍ನಲ್ಲಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗಖಾತರಿ ಯೋಜನೆಯಲ್ಲಿ ಕೈಗೊಂಡಿರುವ ಗೋಕಟ್ಟೆಯ ಹೂಳೆತ್ತುವ ಕಾಮಗಾರಿ ವೀಕ್ಷಿಸಿದ ಸಚಿವರು, ಯಂತ್ರೋಪಕರಣಗಳನ್ನು ಬಳಸದೆ,ಮಾನವ ಸಂಪನ್ಮೂಲ ಬಳಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಧುಗಿರಿ ತಾಲೂಕಿನ ಚನ್ನಸಾಗರ ಗ್ರಾಮದ ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಜಾನುವಾರು ಕುಡಿಯುವ ನೀರಿನ ತೊಟ್ಟಿ ವೀಕ್ಷಿಸಿದ ಸಚಿವ ಶಿವಶಂಕರರೆಡ್ಡಿ,ಜಾನುವಾರುಗಳಿಗೆ ತೊಂದರೆಯಾಗದಂತೆ ತೊಟ್ಟಿಯ ಸುತ್ತಲು ಸಿಮೆಂಟ್ ಕಾಂಕ್ರಿಟ್ ನಿರ್ಮಿಸುವಂತೆ ಸೂಚನೆ ನೀಡಿದರು. ಟಿ.ವಿ.ತಿಮ್ಮಯ್ಯ ಅವರ ತೋಟದಲ್ಲಿ ಕೃಷಿ ಇಲಾಖೆ ವತಿಯಿಂದ ನೀಡಲಾಗಿರುವ ಮೇವಿನ ಕಿಟ್‍ನಲ್ಲಿ ಬೆಳೆದಿರುವ ಜೋಳದ ಹಸಿರು ಮೇವು ವೀಕ್ಷಿಸಿದರು.

ಮಧುಗಿರಿ ತಾಲೂಕಿನ ಕೊಡುಗದಾಲ ಗ್ರಾಪಂ ವ್ಯಾಪ್ತಿಯ ರಂಗನಹಳ್ಳಿ ಗ್ರಾಮದ ಲಕ್ಷ್ಮಮ್ಮ ಕೋ ನಾಗರಾಜು ಅವರ 3 ಎಕರೆ ಭೂಮಿಯಲ್ಲಿ ರೇಷ್ಮೆ ಇಲಾಖೆಯ ಎಂ.ಎನ್.ಆರ್.ಇ.ಜಿ.ಎ ಯಲ್ಲಿ ಬೆಳೆದಿರುವ ಹಿಪ್ಪುನೇರಳೆ ಬೆಳೆ ವೀಕ್ಷಿಸಿದ ತಂಡ ಫಲಾನುಭವಿ ಲಕ್ಷ್ಮಮ್ಮ ಅವರೊಂದಿಗೆ ಚರ್ಚೆ ನಡೆಸಿದರು. ನಂತರ ವೀರನಹಳ್ಳಿ ತಾಂಡದ ರಾಮಯ್ಯ ಅವರ ಜಮೀನಿನಲ್ಲಿ ಬೆಳೆದಿರುವ ಮೇವಿನ ಜೋಳದ ವೀಕ್ಷಿಸಿದರು.

ಸಂಸದರಾದ ಎಸ್.ಪಿಮುದ್ದೇಹನುಮೇಗೌಡ, ಸಚಿವರಾದ ವೆಂಕಟರಮಣಪ್ಪ, ಎಸ್. ಆರ್.ಶ್ರೀನಿವಾಸ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಜಿ.ಪಂ ಸಿ.ಇ.ಒ ಅನೀಸ್ ಕಣ್ಮಿಣಿ ಜಾಯ್, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಶೋಭಾರಾಣಿ, ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ಸೇರಿಂದತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments