ಸಾಗರ ತಾಲೂಕಿನಲ್ಲಿ ಮತ್ತೆ ನಾಲ್ವರಲ್ಲಿ ಮಂಗನಕಾಯಿಲೆ ಲಕ್ಷಣ, ಆಸ್ಪತ್ರೆಗೆ ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

Monkies

ಶಿವಮೊಗ್ಗ, ಜ.14- ಜಿಲ್ಲೆಯ ಸಾಗರ ತಾಲೂಕಿನ ಅರಳಗೋಡು ಸಮೀಪದ ಗ್ರಾಮಗಳಲ್ಲಿ ಮತ್ತೆ ನಾಲ್ವರಲ್ಲಿ ಮಂಗನ ಕಾಯಿಲೆ ರೋಗ ಲಕ್ಷಣಗಳು ಕಂಡುಬಂದಿವೆ.

ಎಲ್ಲ ರೋಗಿಗಳನ್ನು ಉಡುಪಿಯ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಡವಳ್ಳಿ ಗ್ರಾಮದ ಲೋಲಾಕ್ಷಿ, ಸ್ಪೂತರ್, ಕಾಳಮಂಜಿಯ ಲಕ್ಷ್ಮಿ, ಸಂಪ ಗ್ರಾಮದ ಶಾರದಮ್ಮ ಎಂಬುವರು ತೀವ್ರ ಜ್ವರದಿಂದ ಬಳಲುತ್ತಿದ್ದು ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡುತ್ತವೆ.

ಸಾಗರ ತಾಲೂಕಿನ ಮಂಗನ ಕಾಯಿಲೆ ಪೀಡಿತ ಗ್ರಾಮಗಳಲ್ಲಿ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮ ವೇಗ ಪಡೆದುಕೊಂಡಿದೆ.

ಭಾರಂಗಿ, ತಾಳಗುಪ್ಪ, ಆವಿನಹಳ್ಳಿ, ತುಮರಿ, ಹೊಳೆಬಾಗಿಲು, ಕಾಳಮಂಜಿ, ಮುಂಡಳ್ಳಿ, ಮರಬಿಡಿ ಭಾಗದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಗ್ರಾಮಸ್ಥರಿಗೆ ಕೆಎಫ್‍ಡಿ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯ ನಡೆಸುತ್ತಿದ್ದಾರೆ.

ಈಗಾಗಲೇ ನೂರಾರು ಜನರಿಗೆ ಕೆಎಫ್‍ಡಿ ರೋಗ ನಿರೋಧಕ ಲಸಿಕೆ ಹಾಕಲಾಗಿದೆ. ಮತ್ತೊಂದೆಡೆ ದೊಡ್ಡ ಪ್ರಮಾಣದಲ್ಲಿ ಕೆಎಫ್‍ಡಿ ಕಾಣಿಸಿಕೊಂಡಿದ್ದ ಅರಲಗೋಡು ಗ್ರಾಮ ಪಂಚಾಯ್ತಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಕೆಎಫ್‍ಡಿ ನಿಯಂತ್ರಣಕ್ಕೆ ಬರುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಮಾಹಿತಿ ನೀಡುತ್ತಿವೆ.

ಪುಣೆಯ ಪ್ರಯೋಗಾಲಯಕ್ಕೆ ರವಾನಿಸಿದ ಉಣುಗು (ಉಣ್ಣೆ) ಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕೆಎಫ್‍ಡಿ ವೈರಸ್‍ಗಳಿರುವುದು ತಪಾಸಣೆಯಿಂದ ಕಂಡುಬಂದಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡುತ್ತವೆ. ಈ ಕಾರಣದಿಂದ ಕೆಎಫ್‍ಡಿ ವೇಗವಾಗಿ ಹರಡುತ್ತಿದೆ.

ಸದ್ಯ ಶಿವಮೊಗ್ಗ ನಗರದಲ್ಲಿಯೂ ವೈರಸ್ ಪತ್ತೆ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದ್ದು, ಇದರಿಂದ ಶಂಕಿತರ ರಕ್ತದ ಮಾದರಿ ಪರೀಕ್ಷಾ ವರದಿಯನ್ನು ತ್ವರಿತಗತಿಯಲ್ಲಿ ಪಡೆಯಲು ಸಹಾಯಕವಾಗಿದೆ.

ಸಾಗರ ತಾಲೂಕಿನ ಅರಲಗೋಡು ಸುತ್ತಮುತ್ತಲಿನ ಕೆಲ ಗ್ರಾಮಗಳ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇಬ್ಬರು ವಿದ್ಯಾರ್ಥಿಗಳಲ್ಲಿ ಮಂಗನ ಕಾಯಿಲೆಯಿರುವುದು ದೃಢಪಟ್ಟಿದೆ. ಮತ್ತೊಂದೆಡೆ ಅರಲಗೋಡು, ಮಂಡವಳ್ಳಿ ಕೆಲ ಗ್ರಾಮಗಳಲ್ಲಿ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಕೆಲ ಶಾಲೆಗಳು ಬಿಕೋ ಎನ್ನುತ್ತಿವೆ.

Facebook Comments

Sri Raghav

Admin