SHOCKING : ಇನ್ನು 50 ವರ್ಷದಲ್ಲಿ ಸಂಪೂರ್ಣ ನಾಶವಾಗಲಿವೆ ಬಹುತೇಕ ವನ್ಯಜೀವಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

50Years--01

ಮಾನವನ ಮಿತಿ ಮೀರಿದ ಚಟುವಟಿಕೆಗಳಿಂದ ಭೂಮಿಯ ಮೇಲೆ ವಿನಾಶಕಾರಿ ದುಷ್ಪರಿಣಾಮ ಮುಂದುವರಿದಿದೆ. ಸಕಲ ಜೀವ ಸಂಕುಲಗಳ ಉಳಿವಿಗೆ ಆಸರೆಯಾಗಿರುವ ವಸುಂಧರೆಯ ಒಡಲನ್ನೇ ಮಾನವ ತನ್ನ ಸ್ವಾರ್ಥಕ್ಕಾಗಿ ಅಗೆದು ಬಗೆದು ಬರಿದು ಮಾಡುತ್ತಿದ್ದಾನೆ.

ಇದರ ಪರಿಣಾಮ ಅಪಾಯಕಾರಿ ಮಟ್ಟ ತಲುಪಿರುವ ಮಾಲಿನ್ಯ, ನೈಸರ್ಗಿಕ ಸಂಪನ್ಮೂಲ ಕೊರತೆ ಹಾಗೂ ಜೀವವೈವಿಧ್ಯತೆಯ ನಾಶ ಮರುಕಳಿಸುತ್ತಿದೆ. ಮಾನವ ಭೂಮಿಯ ಮೇಲೆ ನಡೆಸುತ್ತಿರುವ ಐದನೇ ಸಮೂಹ ನಾಶ ದುರಂತ ಇದಾಗಿದ್ದು, ಧರಣಿಯ ಅವಸಾನಕ್ಕೆ ಮನುಷ್ಯನೇ ಪ್ಲೇಗ್‍ನಂಥ ಹೆಮ್ಮಾರಿಯಾಗಿದ್ದಾನೆ.

ಮಾನವ ವಿಪರೀತ ಚಟುವಟಿಕೆಯಿಂದಾಗಿ ಮುಂದಿನ 50 ವರ್ಷಗಳಲ್ಲಿ ಬಹುತೇಕ ವನ್ಯಜೀವಿಗಳು ಹೇಳಹೆಸರಿಲ್ಲದಂತೆ ನಾಶವಾಗುತ್ತದೆ ಎಂಬ ಆಘಾತಕಾರಿ ಸಂಗತಿಯನ್ನು ಜೀವ ವಿಜ್ಞಾನಿಗಳು ತಿಳಿಸಿದ್ದಾರೆ. ಮಾನವ ನಿಸರ್ಗದ ಮೇಲೆ ನಡೆಸುತ್ತಿರುವ ಇಂಥ ದಾಳಿಗಳಿಂದ ಭೂಮಿ ಚೇತರಿಸಿಕೊಳ್ಳಲು ಮೂರು ದಶಲಕ್ಷ ವರ್ಷಗಳಷ್ಟು ಸಮಯ ಬೇಕಾಗುತ್ತದೆ.

ಈಗಾಗಲೇ ವಿಶ್ವಾದ್ಯಂತ ಶೇಕಡ 83ರಷ್ಟು ಪ್ರಾಣಿ ಸಂಕುಲಗಳು ಅವನತಿ ಹೊಂದಿರುವ ಆತಂಕದ ಸಂದರ್ಭದಲ್ಲೇ ಈ ಸುದ್ದಿ ಪ್ರಾಣಿಪ್ರಿಯರಿಗೆ ಬರಸಿಡಿಲಿನಂತೆ ಬಡಿದಿದೆ.

ಮಾನವ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆ, ವನ್ಯಜೀವಿಗಳ ರಕ್ಷಣೆಗೆ ಕ್ರಮ ಕೈಗೊಂಡರೂ, ಆತ ಈ ಹಿಂದಿನ ವರ್ಷಗಳಲ್ಲಿ ನಡೆಸಿರುವ ದಾಳಿಗಳ ದುಷ್ಪರಿಣಾಮ 50 ವರ್ಷಗಳಿಗೂ ಹೆಚ್ಚು ಅವಧಿಗೆ ಮುಂದುವರಿದಿದೆ. ಅಂದರೆ ಇನ್ನು ಐದು ದಶಕಗಳಲ್ಲಿ ಅರಣ್ಯ ಮತ್ತು ಸಾಗರ ಪ್ರದೇಶಗಳಲ್ಲಿರುವ ಜೀವ ಸಂಕುಲಗಳ ಅಸ್ತಿತ್ವಕ್ಕೇ ಅಪಾಯ ತಪ್ಪಿದ್ದಲ್ಲ.

ಭೂಮಂಡಲದ ಸದೃಢ ಜೀವಿಗಳಾದ ಆನೆಗಳು ಮತ್ತು ಘೇಂಡಾಮೃಗಗಳ(ಖಡ್ಗ ಮೃಗಗಳು) ಸಂತತಿ ಇದರಿಂದ ಅವನತಿಯಾದರೆ ಅವು ಮತ್ತೆ ಕಾಣಸಿಗುವುದು ದುಸ್ತರ. ಖಗ-ಮೃಗಗಳು, ಪಕ್ಷಿ ಸಂಕುಲಗಳು, ಸಸ್ತನಿ, ಸರಿಸೃಪಗಳು, ಉಭಯಚರ ಜೀವಿಗಳು, ಸಾಗರ ಜೀವಿಗಳು ಮುಂದಿನ 50 ವರ್ಷಗಳಲ್ಲಿ ಸಂಪೂರ್ಣ ಅವಸಾನದ ಅಂಚು ತಲುಪುವ ಸಾಧ್ಯತೆ ಇದೆ ಎಂದು ಜೀವ ವಿಜ್ಞಾನಿಗಳು ಆತಂಕದಿಂದ ಹೇಳಿದ್ದಾರೆ.

ಜನಸಂಖ್ಯಾ ಸ್ಫೋಟ, ಕಾಂಕ್ರೀಟ್ ಕಾಡುಗಳ ವಿಸ್ತರಣೆ, ಅರಣ್ಯ ಪ್ರದೇಶ ನಾಶ, ವನ್ಯಜೀವಿಗಳ ವಾಸಸ್ಥಳಗಳ ಒತ್ತುವರಿ, ಪರಿಸರ ಮಾಲಿನ್ಯ, ಪಾಸ್ಟಿಕ್ ಬಳಕೆ ಮೊದಲಾದ ಕಾರಣಗಳೇ ಇದಕ್ಕೆ ಕಾರಣ ಪ್ರತಿ ವರ್ಷ ಸುಮಾರು 260 ದಶಲಕ್ಷ ಟನ್ನುಗಳಷ್ಟು ಪ್ಲಾಸ್ಟಿಕ್ ಉತ್ಪಾದನೆಯಾಗುತ್ತದೆ. ಎಂಟು ದಶಲಕ್ಷ ಟನ್ನುಗಳಷ್ಟು ಪ್ಲಾಸ್ಟಿಕ್, ಬಾಟಲ್‍ಗಳು. ಪ್ಯಾಕೇಜಿಂಗ್ ಮತ್ತು ಇತರ ತ್ಯಾಜ್ಯಗಳು ಸಾಗರ ಸೇರುತ್ತದೆ.

ಇದರಿಂದ ಸಾಗರದ ಮತ್ಸ್ಯ ಸಂಕುಲ ಸಾವನ್ನಪ್ಪುತ್ತವೆ ಹಾಗೂ ಮಾನವನ ಆಹಾರ ಸರಪಳಿ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸಾಗರದಲ್ಲಿನ ಪ್ಲಾಸ್ಟಿಕ್ ಮಾಲಿನ್ಯದಿಂದಾಗಿ 2050ರ ವೇಳೆಗೆ ಮತ್ಸ್ಯ ಸಂತತಿ ನಾಶವಾಗುತ್ತದೆ ಎಂದು ವಿಶ್ವಸಂಸ್ಥೆ ಇತ್ತೀಚೆಗೆ ಎಚ್ಚರಿಕೆ ನೀಡಿದೆ.

ಲಕ್ಷಾಂತರ ವರ್ಷಗಳ ಶ್ರಮದ ಫಲವಾಗಿ ಹಂತಹಂತವಾಗಿ ವಿಕಸನವಾಗಿದ್ದ ಇಳೆ ಈಗ ಮನುಷ್ಯ ಕೆಲವು ದಶಕಗಳಿಂದ ನಡೆಸುತ್ತಿರುವ ದಾಳಿಗಳಿಂದ ಜರ್ಝರಿತವಾಗಿದೆ. ಈ ವಿನಾಶದಿಂದ ಚೇತರಿಸಿಕೊಳ್ಳಲು ಧರಣಿಗೆ 3 ರಿಂದ 5 ದಶಲಕ್ಷ ವರ್ಷಗಳು ಬೇಕಾಗುತ್ತದೆ ಎಂದು ಪರಿಸರ ಸಂರಕ್ಷಣೆಯ ಅಂತಾರಾಷ್ಟ್ರೀಯ ಒಕ್ಕೂಟ ಹೇಳಿದೆ.

Facebook Comments