‘ನಮ್ಮ ಶಾಸಕರಿಗೆ ಸಿಎಂ ಕುಮಾರಸ್ವಾಮಿ ಸಿಕ್ಕಾಪಟ್ಟೆ ಆಫ಼ರ್ ನೀಡಿದ್ದಾರೆ’

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--And-Yadiyurapp

ಬೆಂಗಳೂರು,ಜ.14- ನಮ್ಮ ಪಕ್ಷದ ಶಾಸಕರಿಗೆ ಮಂತ್ರಿ ಸ್ಥಾನ, ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ಸೇರಿದಂತೆ ನಾನಾ ರೀತಿಯ ಆಮಿಷಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಒಡ್ಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾದ್ಯಕ್ಷ ಯಡಿಯೂರಪ್ಪ, ಆಪರೇಷನ್ ಕಮಲದ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕಾಂಗ್ರೆಸ್‍ನ ಯಾವುದೇ ಶಾಸಕರನ್ನು ಸಂಪರ್ಕ ಮಾಡಿಲ್ಲ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುವಾಗ ಶಾಸಕರನ್ನು ಯಾವ ಕಾರಣಕ್ಕೆ ಭೇಟಿ ಮಾಡಬೇಕೆಂದು ಪ್ರಶ್ನಿಸಿದರು.

ನಮ್ಮ ಪಕ್ಷದ ಶಾಸಕರಿಗೆ ಆಮಿಷಗಳನ್ನು ಒಡ್ಡುವ ಮೂಲಕ ಕುಮಾರಸ್ವಾಮಿ ಅವರು ಬಿಜೆಪಿಯನ್ನುಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರದ ನಡೆಯಿಂದ ಬೇಸತ್ತು ಶಾಸಕರು ಎಲ್ಲಿಗೆ ಹೋಗಿದ್ದಾರೆ ಎಂಬುದು ಗೊತ್ತಿಲ್ಲ.

ಇನ್ನು ನಿಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಆಪರೇಷನ್ ಕಮಲ ಎಂಬ ಸುಳ್ಳು ಆರೋಪ ಮಾಡುತ್ತಿದ್ದೀರಿ. ಮೊದಲು ನಿಮ್ಮ ಶಾಸಕರನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಿ ಎಂದು ಸಿಎಂಗೆ ಟಾಂಗ್ ನೀಡಿದರು.

ಕಾಂಗ್ರೆಸ್ ಮುಖಂಡರು, ಸಚಿವರು ಒಟ್ಟಾಗಿ ಕುಳಿತುಕೊಂಡು ಸಭೆ ನಡೆಸಿದರೆ ಅದೇನು ತಪ್ಪಲ್ಲ. ಅದನ್ನು ಪ್ರಶ್ನಿಸುವ ಅಧಿಕಾರ ನಮಗೂ ಇಲ್ಲ. ಅವರವರ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಭೆ ನಡೆಸಿದರೆ ಅದಕ್ಕೆ ರಾಜಕೀಯ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದರು.

ಬರಲಿರುವ ಲೋಕಸಭೆ ಚುನಾವಣೆ ಕುರಿತಂತೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳನ್ನು ರೂಪಿಸಲು ಎಲ್ಲ ಶಾಸಕರನ್ನು ವರಿಷ್ಠರ ಸೂಚನೆ ಮೇರೆಗೆ ಕರೆಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಈ ಬಾರಿ ಹೆಚ್ಚಿನ ಸ್ಥಾನ ಗಳಿಸಲು ನಮ್ಮದೇ ಆದ ಕಾರ್ಯತಂತ್ರ ರೂಪಿಸಿದ್ದೇವೆ.

ಸಮ್ಮಿಶ್ರ ಸರ್ಕಾರದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೂ ನಮ್ಮ ಶಾಸಕರು ದೆಹಲಿಗೆ ಬಂದಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ನಿನ್ನೆ ನಡೆಯಬೇಕಿದ್ದ ಸಭೆ ಕೆಲವು ಕಾರಣಗಳಿಂದ ಮುಂದೂಡಲಾಗಿತ್ತು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಸಭೆಯಲ್ಲಿ ಮುಕ್ತವಾಗಿ ಚರ್ಚಿಸಿ ಕೆಲವು ಸಲಹೆ ಸೂಚನೆಗಳನ್ನು ನೀಡಲಿದ್ದಾರೆ. ಬಹುದಿನಗಳ ನಂತರ ಶಾಸಕರು, ವಿಧಾನಪರಿಷತ್ ರಾಜ್ಯಸಭಾ ಹಾಗೂ ಲೋಕಸಭಾ ಸದಸ್ಯರು, ಕೇಂದ್ರವನ್ನು ಪ್ರತಿನಿಧಿಸುವ ರಾಜ್ಯ ಸಚಿವರು, ಪದಾಧಿಕಾರಿಗಳು ಒಟ್ಟಾಗಿ ಕುಳಿತು ಸಭೆ ನಡೆಸಿದ್ದೇವೆ. ಇದರಲ್ಲಿ ತಪ್ಪೇನಿದೆ ಎಂದು ಬಿಎಸ್‍ವೈ ಮಾಧ್ಯಮದವರನ್ನು ಪ್ರಶ್ನಿಸಿದರು.

ಬೆಂಗಳೂರಿಗೆ ಶಾಸಕರು ಯಾವಾಗ ಹೋಗುತ್ತಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಅದನ್ನು ನಿಮಗೆ ಹೇಳಿಯೇ ಹೋಗುತ್ತೇವೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

Facebook Comments

Sri Raghav

Admin