ಬ್ರಿಟನ್ ಸರ್ಕಾರಕ್ಕೆ ಇತಿಹಾಸದಲ್ಲೇ ಅತಿದೊಡ್ಡ ಸೋಲು..!
ಲಂಡನ್, ಜ.16-ಬ್ರಿಕ್ಸಿಟ್(ಬ್ರಿಟನ್ ಎಕ್ಸಿಟ್-ಐರೋಪ್ಯ ಸಮುದಾಯದಿಂದ ಬ್ರಿಟನ್ ನಿರ್ಗಮಿಸುವಿಕೆ) ವಿಷಯದಲ್ಲಿ ಪ್ರಧಾನಮಂತ್ರಿ ಥೆರೇಸಾ ಮೇ ನೇತೃತ್ವದ ಬ್ರಿಟನ್ ಸರ್ಕಾರಕ್ಕೆ ಇಂಗ್ಲೆಂಡ್ ಇತಿಹಾಸದಲ್ಲೇ ಅತಿದೊಡ್ಡ ಸೋಲುಂಟಾಗಿದೆ.
ಬ್ರಿಕ್ಸಿಟ್ ವಿಚ್ಛೇದನ ಪಡೆಯುವ ಥೆರೇಸಾ ಬಣದ ಯತ್ನವನ್ನು ಸಂಸತ್ತಿನಲ್ಲಿ ಸದಸ್ಯರು ತಳ್ಳಿ ಹಾಕಿದ್ದಾರೆ. ಮಾರ್ಚ್ 29ರಂದು ಬ್ರಿಕ್ಸಿಟ್ ವಿಷಯದಲ್ಲಿ ಮಹತ್ವದ ಬೆಳವಣಿಗೆಯಾಗಲಿದೆ ಎಂದು ನಿರೀಕ್ಷಿಸುತ್ತಿದ್ದ ಬ್ರಿಟನ್ ಜನತೆಗೆ ಐರೋಪ್ಯ ಸಮುದಾಯದಿಂದ ಇಂಗ್ಲೆಂಡ್ ಹೊರ ಹೋಗುವ ಸಾಧ್ಯತೆ ಇಲ್ಲ ಎಂಬುದು ಮನವರಿಕೆಯಾಗಿದೆ.
ಈ ಭಾರೀ ಪರಾಭವದಿಂದಾಗಿ ಥೆರೇಸಾ ಅವರು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಎದುರಿಸಬೇಕಿದೆ ಅಲ್ಲದೇ ಈ ಸೋಲು ಸರ್ಕಾರ ಮತ್ತು ಬ್ರಿಕ್ಸಿಟ್ಗಾಗಿ ಅದು ರೂಪಿಸಿದ್ದ ಯೋಜನೆ ಬಿಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.
ಯೂರೋಪ್ ಒಕ್ಕೂಟದಿಂದ ದೂರ ಸರಿಯುವ ಹಿಂತೆಗೆದ ಒಪ್ಪಂದಕ್ಕೆ ಸಮ್ಮತಿ ಪಡೆಯಲು ಪ್ರಧಾನಿ ಯತ್ನಿಸಿದ್ದರು. ಇದು ಲಂಡನ್ ಮತ್ತು ಬ್ರುಸೆಲ್ಸ್ ನಗರಗಳ ನಡುವೆ ಭಾರೀ ಭಿನ್ನಾಭಿಪ್ರಾಯಗಳಿಗೆ ಕಾರಣವಾಯಿತು.
ಸಂಸತ್ತಿನಲ್ಲಿ 432 ಮತಗಳಲ್ಲಿ ಬ್ರಿಕ್ಸಿಟ್ ವಿರುದ್ಧ 230 ಹಾಗೂ ಪರ 202 ಮತಗಳು ಚಲಾವಣೆಯಾದವು. ಇದು ಆಧುನಿಕ ರಾಜಕೀಯ ಚರಿತ್ರೆಯಲ್ಲಿ ಬ್ರಿಟನ್ ಪ್ರಧಾನಿಯೊಬ್ಬರಿಗೆ ಆದ ಅತ್ಯಂತ ದೊಡ್ಡ ಸೋಲು. ಈ ನಿರ್ಣಯ ಪರಾಭವಗೊಂಡ ನಂತರ ಬ್ರಿಟನ್ ವಿರೋಧಪಕ್ಷದ ನಾಯಕ ಲೇಬರ್ ಪಾರ್ಟಿಯ ಜರೆಎಮಿ ಕಾರ್ಬಿನ್, ಮೇ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿದರು.
1973ರಲ್ಲಿ ಐರೋಪ್ಯ ಸಮುದಾಯಕ್ಕೆ ಬ್ರಿಟನ್ ಸೇರ್ಪಡೆಯಾಗಿತ್ತು. ಈ ಒಕ್ಕೂಟದಲ್ಲಿ ಒಟ್ಟು 28 ರಾಷ್ಟ್ರಗಳಿದ್ದು, ಇದರಿಂದ ದೂರ ಸರಿಯಲು ಪ್ರಧಾನಿ ಥೆರೇಸಾ ಮೇ ಮತ್ತು ಆವರ ಬಣ ವೇದಿಕೆ ಸಜ್ಜುಗೊಳಿಸಿತ್ತು. ಆದರೆ ಮಾರ್ಚ್ 29 ನಿರ್ಣಾಯಕ ದಿನಕ್ಕೆ ಮುನ್ನವೇ ಬ್ರಿಟನ್ ಸರ್ಕಾರಕ್ಕೆ ಸೋಲುಂಟಾಗಿದೆ.