ನಾನು ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ : ಶಾಸಕ ಭೀಮಾನಾಯ್ಕ್

ಈ ಸುದ್ದಿಯನ್ನು ಶೇರ್ ಮಾಡಿ

BHeemanaik-01

ಬೆಂಗಳೂರು, ಜ.16- ಆಪರೇಷನ್ ಕಮಲಕ್ಕೆ ನಾನು ಒಳಗಾಗಿಲ್ಲ. ಕಾಂಗ್ರೆಸ್ ಬಿಡುವುದಿಲ್ಲ. ಬಿಜೆಪಿ ಸೇರುವುದಿಲ್ಲ ಎಂದು ಶಾಸಕ ಭೀಮಾನಾಯ್ಕ್ ಸ್ಪಷ್ಟಪಡಿಸಿದ್ದಾರೆ. ಕುಮಾರಕೃಪಾ ಅತಿಥಿ ಗೃಹಕ್ಕೆ ಆಗಮಿಸಿದ ಅವರು, ವೇಣುಗೋಪಾಲ್ ಅವರನ್ನು ಭೇಟಿ ಮಾಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.

ಮೈತ್ರಿ ಸರ್ಕಾರ ರಚನೆ ಆರಂಭದಲ್ಲಿ ಬಿಜೆಪಿಯವರು ನನ್ನನ್ನು ಸಂಪರ್ಕಿಸಿದ್ದರು. ಆದರೆ ಇತ್ತೀಚೆಗೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ನಾನು ಬಿಜೆಪಿಗೆ ಹೋಗುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದೆ ಎಂಬುದು ಸುಳ್ಳುಮಾಹಿತಿ. ಶುಕ್ರವಾರ ಬೆಂಗಳೂರಿನಲ್ಲಿದ್ದೆ, ಶನಿವಾರ ಜಿಂದಲ್ ಫ್ಲೈಟ್ ಹತ್ತಿ ಕ್ಷೇತ್ರಕ್ಕೆಹೋದೆ. ಸೋಮವಾರ ಗೋವಾದಲ್ಲಿದ್ದೆ. ಗೋವಾಕ್ಕೆ ಹೋದಾಗ ಎರಡು ದಿನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದೆ.

ಆದರೆ ಬೇರೆ ನಂಬರ್‍ಗಳಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಮೀರ್ ಅಹಮ್ಮದ್ ಖಾನ್ ಸೇರಿದಂತೆ ಹಲವಾರು ಮಂದಿ ನಾಯಕರ ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದೆ. ನನ್ನ ಕ್ಷೇತ್ರದ ಮುಖಂಡರ ಜೊತೆಯೂ ಸಂಪರ್ಕದಲ್ಲಿದ್ದೆ. ನಾನು ಎಲ್ಲಿಯೂ ಹೋಗಿಲ್ಲ. ಮೊಬೈಲ್ ಸ್ವಿಚ್‍ಆಫ್ ಮಾಡಿದ್ದು ಒತ್ತಡದ ತಂತ್ರ ಅಲ್ಲ.

ಸಚಿವ ಸ್ಥಾನ ಸಿಗದೆ ಇರುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಪಿ.ಟಿ.ಪರಮೇಶ್ವರ್‍ನಾಯಕ್ ಸೇರಿದಂತೆ ಯಾರಿಗೆ ಸಚಿವ ಸ್ಥಾನ ಕೊಟ್ಟರೂ ಅದನ್ನು ಸ್ವಾಗತಿಸುವುದಾಗಿ ಈ ಮೊದಲೇ ಹೇಳಿದ್ದೆ. ನಮ್ಮ ಬೇಸರಗಳಿಗೂ ಈಗಿನ ರಾಜಕೀಯಕ್ಕೂ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Facebook Comments