ಕಾಟನ್‍ಪೇಟೆಯಲ್ಲಿ ಡ್ರ್ಯಾಗರ್‍ನಿಂದ ಇರಿದು ರೌಡಿಯ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

murderಬೆಂಗಳೂರು, ಜ.16- ಕೀಟಲೆ ಮಾಡಿದ ಹಳೆ ಸ್ನೇಹಿತನಿಗೆ ಹಾಕಿ ಸ್ಟಿಕ್‍ನಿಂದ ರೌಡಿ ಹಲ್ಲೆ ಮಾಡಿದ್ದರಿಂದ ಕೋಪಗೊಂಡ ಸ್ನೇಹಿತ ಡ್ರ್ಯಾಗರ್‍ನಿಂದ ಇರಿದು ರೌಡಿಯನ್ನು ಕೊಲೆ ಮಾಡಿರುವ ಘಟನೆ ಕಾಟನ್‍ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಾಟನ್‍ಪೇಟೆ ನಿವಾಸಿ ಸತೀಶ್ ಅಲಿಯಾಸ್ ಸತ್ಯ ಅಲಿಯಾಸ್ ಕುಳ್ಳ ಸತ್ಯ(28) ಕೊಲೆಯಾದ ರೌಡಿ.

ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದ ಸತೀಶ್‍ನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು. ಸತೀಶ್ ಹಾಗೂ ಪ್ರಶಾಂತ್ ಹಳೆ ಸ್ನೇಹಿತರಾಗಿದ್ದು, ಇತ್ತೀಚೆಗೆ ಕ್ಷುಲ್ಲಕ ವಿಚಾರವಾಗಿ ಜಗಳವಾಡಿಕೊಂಡಿದ್ದರು ಎನ್ನಲಾಗಿದೆ.

ರಾತ್ರಿ ಅಂಜನಪ್ಪ ಗಾರ್ಡನ್ ಸಿ ಲೇನ್‍ನಲ್ಲಿ ಇವರಿಬ್ಬರು ಎದುರಾಗಿ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಪ್ರಶಾಂತ್ ಈ ವೇಳೆ ಸತೀಶನ ಮುಖಕ್ಕೆ ಉಗಿದಿದ್ದಾನೆ. ಇದರಿಂದ ಕೋಪಗೊಂಡ ಸತೀಶ್ ಹಾಕಿ ಸ್ಟಿಕ್‍ನಿಂದ ಪ್ರಶಾಂತ್‍ಗೆ ಹೊಡೆದಿದ್ದಾನೆ.

ಇಷ್ಟಕ್ಕೆ ಸುಮ್ಮನಾಗದ ಪ್ರಶಾಂತ್ ಮನೆಗೆ ಹೋಗಿ ಡ್ರ್ಯಾಗರ್ ತಂದು ಸತ್ಯನಿಗೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸುದ್ದಿ ತಿಳಿದ ಕಾಟನ್‍ಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ತನಿಖೆ ಕೈಗೊಂಡಿದ್ದಾರೆ.

Facebook Comments