ಹಂದಿಜ್ವರ ಬಳಲುತ್ತಿದ್ದ ಅಮಿತ್ ಷಾ ಚೇತರಿಕೆ
ನವದೆಹಲಿ,ಜ.17- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಂದಿಜ್ವರ(ಎಚ್1ಎನ್1)ದಿಂದ ಬಳಲುತ್ತಿದ್ದು, ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಒಂದೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಮಿತ್ ಷಾಅವರು ಬೇಗನೆ ಗುಣಮುಖರಾಗಲಿ ಎಂದು ಹಾರೈಸಿದ ಎಲ್ಲರಿಗೂ ಧನ್ಯವಾದಗಳು ಎಂದು ಪಕ್ಷದ ಮಾಧ್ಯಮ ಮುಖ್ಯಸ್ಥ ಮತ್ತು ರಾಜ್ಯಸಭಾ ಸದಸ್ಯ ಅನಿಲ್ ಬಲೂನಿ ಹೇಳಿದ್ದಾರೆ.
ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ನೇತೃತ್ವದ ವೈದ್ಯರ ತಂಡವು ಅಮಿತ್ ಷಾ ಅವರನ್ನು ಶುಶ್ರೂಷೆ ಮಾಡುತ್ತಿದೆ. ಷಾ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ರಣದೀಪ್ ಗುಲೇರಿಯ ತಿಳಿಸಿದ್ದಾರೆ.
ಎಚ್1ಎನ್1 ಇದೆ ಎಂಬುದರ ಬಗ್ಗೆ ಸ್ವತ: ಟ್ವೀಟ್ ಮಾಡಿರುವ ಅಮಿತ್ ಶಾ, ದೇವರ ಅನುಗ್ರಹ ಹಾಗೂ ನಿಮ್ಮೆಲ್ಲರ ಶುಭ ಹಾರೈಕೆಗಳಿಂದ, ನಾನು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಇವೆಲ್ಲದರ ನಡುವೆ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ಹೋಗಲಿದ್ದಾರೆ ಎಂದು ಹೇಳಲಾಗಿದೆ.
ಅರುಣ್ ಜೇಟ್ಲಿ ಅವರಿಗೆ ಮೃದು ಅಂಗಾಂಶ ಕ್ಯಾನ್ಸರ್ ತಗುಲಿದೆ ಎಂದು ತಿಳಿದುಬಂದಿದ್ದು, ಸದ್ಯ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿರುವುದರಿಂದ ಅವರು ಫೆ.1ರಂದು ಮಂಡನೆಯಾಗುವ ಬಜೆಟ್ಗೆ ಹಾಜರಾಗುವುದು ಅನುಮಾನ ಎಂದು ಹೇಳಲಾಗಿದೆ.