ಅನಾಥ ಮಗುವಿಗೆ ಎದೆಹಾಲುಣಿಸಿದ ಪೊಲೀಸ್ ‘ಅಮ್ಮ’

ಈ ಸುದ್ದಿಯನ್ನು ಶೇರ್ ಮಾಡಿ

Police--01

ಬೆಂಗಳೂರು,ಜ.17- ಪೊದೆಯಲ್ಲಿ ಸಿಕ್ಕ ನವಜಾತ ಶಿಶುವಿಗೆ ಎದೆಹಾಲು ಉಣಿಸಿ ಮಾತೃ ಹೃದಯ ಮೆರೆದಿದ್ದ ಎಲೆಕ್ಟ್ರಾನಿಕ್ ಸಿಟಿ ಮಹಿಳಾ ಪೊಲೀಸ್ ಕಾನ್‍ಸ್ಟೆಬಲ್ ಅರ್ಚನಾ ಅವರ ಮಾದರಿಯಲ್ಲೇ ಮತ್ತೊಬ್ಬ ಮಹಿಳಾ ಪೊಲೀಸ್ ನವಜಾತ ಶಿಶುವಿಗೆ ಹಾಲುಣಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

10 ತಿಂಗಳ ಬಾಣಂತಿಯಾಗಿರುವ ಯಲಹಂಕ ಪೊಲೀಸ್ ಠಾಣೆಯ ಮಹಿಳಾ ಕಾನ್‍ಸ್ಟೆಬಲ್ ಸಂಗೀತ ಹಳಿಮನಿ, ಅನಾಥ ಮಗುವಿಗೆ ಎದೆಹಾಲು ಉಣಿಸಿ ಮಾನವೀಯತೆ ತೋರಿದ್ದಾರೆ.

ಬಿಜಾಪುರ ಜಿಲ್ಲೆಯ ಬಾಗೇವಾಡಿ ಮೂಲದವರಾದ ಸಂಗೀತ ಹಳಿಮನಿ ಮೂರು ವರ್ಷದ ಹಿಂದೆ ಪೊಲೀಸ್ ಇಲಾಖೆ ಸೇರಿದ್ದರು. ಸಂಗೀತ ಅವರಿಗೆ 10 ತಿಂಗಳ ಹೆಣ್ಣುಮಗುವಿದೆ. ನಿನ್ನೆ ಬೆಳಗ್ಗೆ ಜಿಕೆವಿಕೆ ಸಮೀಪದಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿದೆ ಎಂಬ ಮಾಹಿತಿ ದೊರೆಯುತ್ತಿದ್ದಂತೆ ಸಂಗೀತ ಮತ್ತಿತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು.

ಮಾತೃ ಪ್ರೇಮದಿಂದ ವಂಚಿತವಾಗಿ ರೋಧಿಸುತ್ತಿದ್ದ ನವಜಾತ ಶಿಶುವನ್ನು ನೋಡುತ್ತಿದ್ದಂತೆ ಸಂಗೀತ ಅವರ ಮಾತೃ ಹೃದಯ ಮಿಡಿಯಿತು. ತಕ್ಷಣ ಅನಾಥ ಶಿಶುವನ್ನು ಎದೆಗವಚಿಕೊಂಡ ಮಹಾತಾಯಿ ಮಗುವಿಗೆ ಹಾಲು ಉಣಿಸಿ ಸಂತೈಸಿದರು.

ಸಂಗೀತ ಅವರ ಆರೈಕೆ ನಂತರ ಅನಾಥ ಶಿಶು ಚೇತರಿಸಿಕೊಂಡಿದ್ದು, ವಾಣಿ ವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅನಾಥ ಶಿಶುವಿಗೆ ಹಾಲು ಉಣಿಸಿದ ಮಹಿಳಾ ಕಾನ್‍ಸ್ಟೆಬಲ್ ಮಾತೃ ಹೃದಯಕ್ಕೆ ಪೊಲೀಸ್ ಇಲಾಖೆ ಸಲ್ಯೂಟ್ ಹೊಡೆದಿದೆ.  ಸಂಗೀತ ಅವರ ಕಾರ್ಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಮಿಡಿದ ಹೃದಯ:
ನಾನು 10 ತಿಂಗಳ ಬಾಣಂತಿ. ಅನಾಥ ಮಗುವನ್ನು ನೋಡುತ್ತಿದ್ದಂತೆ ಒಂದು ಕ್ಷಣ ನನ್ನ ತಾಯಿ ಹೃದಯ ಮಿಡಿಯಿತು. ಹಿಂದೆಮುಂದೆ ನೋಡದೆ ಮಗುವಿಗೆ ಎದೆಹಾಲು ಉಣಿಸುವ ಮೂಲಕ ಅನಾಥ ಮಗುವಿಗೆ ತಾಯಿಯಾದ ಸಂತೋಷ ನನಗಿದೆ ಎಂದು ಈ ಸಂಜೆಗೆ ಪ್ರತಿಕ್ರಿಯಿಸಿದ್ದಾರೆ ಸಂಗೀತ ಹಳಿಮನಿ.

ಕರುಣೆ ಇಲ್ಲದ ತಾಯಿ ತನ್ನ ಮುದ್ದಾದ ಮಗುವನ್ನು ಅನಾಥವಾಗಿ ಬಿಟ್ಟು ಹೋಗಿದ್ದಾರೆ. ಇದು ಹೆಣ್ತತನಕ್ಕೆ ಶಾಪ. ಇಂಥ ಕೃತ್ಯಕ್ಕೆ ಯಾರೂ ಮುಂದಾಗಬಾರದು ಎಂದು ಸಂಗೀತ ಮನವಿ ಮಾಡಿಕೊಂಡಿದ್ದಾರೆ.

Police--011

Facebook Comments

Sri Raghav

Admin