‘ಬಿಜೆಪಿಯವರು ಸಂ`ಕ್ರಾಂತಿ’ ಮಾಡಲು ಹೋಗಿ ಸಂ`ಭ್ರಾಂತಿ’ ಮಾಡಿಕೊಂಡಿದ್ದಾರೆ’

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-CM

ಬೆಂಗಳೂರು, ಜ.17- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಬಿಜೆಪಿ ನಾಯಕರು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ನಾವು ಹೇಳಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾವುದೇ ಆಪರೇಷನ್‍ಗೂ ಕೈ ಹಾಕಿಲ್ಲ. ಆದರೂ ಬಿಜೆಪಿ ನಾಯಕರು ಎಲ್ಲಾ ರೀತಿಯ ವ್ಯರ್ಥ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು.  ರಾಜ್ಯದಲ್ಲಿ ಜ.15ರಂದು ಸಂ`ಕ್ರಾಂತಿ’ ಮಾಡಲು ಹೋಗಿ ಸಂ`ಭ್ರಾಂತಿ’ಮಾಡಿಕೊಂಡಿದ್ದಾರೆ ಎಂಬುದು ತಮ್ಮ ಅಭಿಪ್ರಾಯ ಎಂದರು.

ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂಬುದನ್ನು ಮಾಧ್ಯಮದಲ್ಲಿ ಗಮನಿಸಿದ್ದಾಗಿ ಹೇಳಿದ ಮುಖ್ಯಮಂತ್ರಿ, ಬಿಜೆಪಿಯ ತಂತ್ರ ತಿರುಗುಮುರುಗಾಗಿ ಸಂ`ಕ್ರಾಂತಿ’ಯ ಬದಲು ಸಂ`ಭ್ರಾಂತಿ’ಯಾಗಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ಶಾಸಕರಿಗೆ ನಾವು ಆಮಿಷವೊಡ್ಡುತ್ತಿದ್ದೇವೆ ಎಂದು ಹೇಳುತ್ತಿರುವುದು ಆಶ್ಚರ್ಯ ಉಂಟು ಮಾಡಿದೆ. ಹೊಸ ವರ್ಷದ ಸಂದರ್ಭದಲ್ಲಿ ನಾನು ನಮ್ಮ ಕುಟುಂಬದ ಜತೆ ವಿದೇಶಕ್ಕೆ ಹೋಗಿದ್ದನ್ನು ಯಡಿಯೂರಪ್ಪ ಅವರು ದೊಡ್ಡ ವಿಚಾರವಾಗಿ ಟೀಕೆ ಮಾಡಿದ್ದರು. ಈಗ ಯಾವ ಪುರುಷಾರ್ಥ ಸಾಧನೆಗಾಗಿ ಹರಿಯಾಣದ ಗುರುಗ್ರಾಮದ ಹೋಟೆಲ್‍ನಲ್ಲಿ ಬಿಜೆಪಿ ಶಾಸಕರನ್ನು ಕೂಡಿಹಾಕಿದ್ದಾರೆ ಎಂದು ಪ್ರಶ್ನಿಸಿದರು.

ಹೋಟೆಲ್‍ನಲ್ಲೇ ಕುಳಿತು ಬಿಜೆಪಿ ಶಾಸಕರು ಬರ ಪರಿಸ್ಥಿತಿಯ ವೀಕ್ಷಣೆ ಮಾಡುತ್ತಿದ್ದಾರೆಯೇ ? ತಾವು ಎರಡು-ಮೂರು ದಿನ ರಾಜ್ಯದಿಂದ ಹೊರ ಹೋಗಿದ್ದಕ್ಕೆ ಆರೋಪಗಳ ಸುರಿ ಮಳೆ ಮಾಡಿದ್ದರು.  ಈಗ ಬಿಜೆಪಿ ಶಾಸಕರನ್ನು ಹೋಟೆಲ್‍ನಲ್ಲಿ ಕೂಡಿ ಹಾಕಿ ಅವರ ಮೊಬೈಲ್‍ಅನ್ನು ಕಿತ್ತುಕೊಂಡು ದಿಗ್ಭಂಧನ ಹಾಕಲಾಗಿದೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದೆ. ಈಗ ಬರ ಪರಿಸ್ಥಿತಿ ನಿವಾರಣೆಯಾಗಿ ಜನರು ಕಷ್ಟದಿಂದ ಸುಖಕ್ಕೆ ಮರಳಿದ್ದಾರೆಯೇ ಎಂದು ವ್ಯಂಗ್ಯ ವಾಡಿದರು.

ಕಳೆದ ಒಂದು ವಾರದಿಂದ ಅಲ್ಲಿ ಕುಳಿತು ಶಾಸಕರನ್ನು ಕೂಡಿ ಹಾಕಿ ಏನು ಮಾಡುತ್ತಿದ್ದೀರಿ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು. ಜೆಡಿಎಸ್-ಕಾಂಗ್ರೆಸ್ ತಮ್ಮ ಶಾಸಕರನ್ನು ಸರಿಯಾಗಿ ಇಟ್ಟುಕೊಳ್ಳದೆ ನಮ್ಮ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಬಿಜೆಪಿಯವರು ಹೇಳುತ್ತಿದ್ದರು. ಶಾಸಕರನ್ನು ಒಟ್ಟಾಗಿ ಹಿಡಿದಿಟ್ಟುಕೊಳ್ಳುವುದು ದೇಶದೆಲ್ಲೆಡೆ ನಡೆಯುತ್ತಿದೆ.

ಇದೊಂದು ಸಂಪ್ರದಾಯವೂ ಆಗಿದೆ. ಆದರೆ, ನಿಮ್ಮ ಮತ್ತು ನಿಮ್ಮ ಶಾಸಕರ ನಡುವಿನ ಭಿನ್ನಾಭಿಪ್ರಾಯ ಏನಿದೆ ? ಇಲ್ಲದಿದ್ದರೆ ಏಕೆ ದಿಗ್ಭಂಧನ ಹಾಕುತ್ತಿದ್ದಿರಿ ? ನಾವು ನಮ್ಮ ಶಾಸಕರಿಗೆ ಯಾವುದೇ ರೀತಿಯ ದಿಗ್ಬಂಧನ ಹಾಕಿಲ್ಲ. ಎಲ್ಲರನ್ನೂ ಮುಕ್ತವಾಗಿ ಬಿಟ್ಟಿದ್ದೇವೆ. ಬಿಜೆಪಿಯ ಇಂತಹ ಪ್ರಯತ್ನಗಳಿಗೆ ನಾಡಿನ ಜನತೆ ಸರಿಯಾದ ಸಮಯದಲ್ಲಿ ತಕ್ಕ ಉತ್ತರವನ್ನು ಕೊಡಲಿದ್ದಾರೆ ಎಂದು ಹೇಳಿದರು.

Facebook Comments

Sri Raghav

Admin