‘ನಿಮಗೆ ತಾಕತ್ತಿದ್ದರೆ ಭಿನ್ನಮತೀಯರನ್ನು ಪಕ್ಷದಿಂದ ಉಚ್ಛಾಟಿಸಿ’ : ಸಿಟಿ ರವಿ ಹಿಗ್ಗಾಮುಗ್ಗಾ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

CT-Ravi

ಬೆಂಗಳೂರು,ಜ.17- ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರುವ ಭಿನ್ನಮತಕ್ಕೆ ಬಿಜೆಪಿಯೇ ಕಾರಣ ಎಂದು ಟೀಕಿಸುವ ಬದಲು ನಿಮಗೆ ತಾಕತ್ತಿದ್ದರೆ ಭಿನ್ನಮತೀಯರನ್ನು ಪಕ್ಷದಿಂದ ಉಚ್ಛಾಟಿಸಿ ಎಂದು ಶಾಸಕ ಸಿ.ಟಿ.ರವಿ ಸವಾಲು ಹಾಕಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಜನಾಭಿಪ್ರಾಯಕ್ಕೆ ವಿರುದ್ಧವಾಗಿ ರಚಿತವಾದ ಸರ್ಕಾರ. ಯಾರೊಬ್ಬರಿಗೂ ಅಧಿಕಾರದಲ್ಲಿ ಮುಂದುವರೆಯುವುದು ಇಷ್ಟವಿಲ್ಲ.

ನಮ್ಮನ್ನು ಟೀಕಿಸುವ ಮೊದಲು ನಿಮ್ಮ ಪಕ್ಷದ ವಿರುದ್ಧ ಬಂಡಾಯ ಸಾರಿರುವವರ ವಿರುದ್ಧ ಶಿಸ್ತು ಕ್ರಮ ಇಲ್ಲವೇ ಉಚ್ಛಾಟನೆ ಮಾಡಿ ಎಂದು ಸವಾಲು ಎಸೆದರು.
ನಾವಿರುವುದೇ ರಾಜಕಾರಣ ಮಾಡಲು. ನಿಮ್ಮ ಭಿನ್ನಮತಕ್ಕೆ ತುಪ್ಪ ಈಗಲೂ ಸುರಿದಿದ್ದೇವೆ. ಮುಂದೆಯೂ ಸುರಿಯುತ್ತೇವೆ. ಹಿಂದೆ ನೀವು ಏನು ಮಾಡಿದ್ದೀರೋ, ಅದನ್ನೇ ನಾವು ಮಾಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು.

ರಾಜಕಾರಣ ನಿಂತ ನೀರಲ್ಲ. 104 ಜನ ಶಾಸಕರನ್ನು ಗೆದ್ದಿರುವ ನಮ್ಮ ಪಕ್ಷ ಸುಮ್ಮನೆ ಕುಳಿತಿಲ್ಲ. ಅನೇಕ ಭಿನ್ನಮತೀಯ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಇದಕ್ಕೆ ಸಹಕಾರ ನೀಡುತ್ತಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಿದ್ದರಾಮಯ್ಯನವರ ಸಹಕಾರವನ್ನು ಎಂದಿಗೂ ಮರೆಯುವುದಿಲ್ಲ ಎಂದು ವ್ಯಂಗ್ಯವಾಡಿದರು.

2010ರಲ್ಲಿ ಅಂದು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಲು ಕುಮಾರಸ್ವಾಮಿ ಅವರು ನಿರ್ವಾಹಕರಾಗಿ, ಜಮೀರ್ ಅಹಮ್ಮದ್ ಚಾಲಕರಾಗಿ, ಸಚಿವ ಡಿ.ಕೆ.ಶಿವಕುಮಾರ್ ಟ್ರಾಫಿಕ್ ಕಂಟ್ರೋಲರ್ ಆಗಿ ಕೆಲಸ ಮಾಡಿದ್ದರು. ಅಂದು ಜನರ ಹಿತಕ್ಕಾಗಿ ನೀವು ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿದ್ದೀರಿ. ನೀವು ಮಾಡಿದ ಕೆಲಸ ಸರಿಯಾಗಿತ್ತು ಎನ್ನುವುದಾದರೆ ಇಂದು ನಾವು ಮಾಡುತ್ತಿರುವುದು ತಪ್ಪೇ ಎಂದು ಪ್ರಶ್ನಿಸಿದರು.

# ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ ಸಿ.ಟಿ.ರವಿ, ಮರ್ಯಾದಾ ಪುರೋಷತ್ತಮರಾಗಿರುವ ನೀವು, ನಿಮ್ಮನ್ನು ಸೋಲಿಸಿದವರ ಜೊತೆ ಸರ್ಕಾರ ರಚನೆ ಮಾಡಲು ಕೈ ಜೋಡಿಸಿದ್ದು ಯಾವ ನೈತಿಕತೆ? ಮಾನ ಮರ್ಯಾದೆ ಇದ್ದಿದ್ದರೆ ಈ ಕೆಲಸವನ್ನು ಮಾಡುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.

ಚಾಮುಂಡೇಶ್ವರಿಯಲ್ಲಿ ನಿಮ್ಮನ್ನು ಸೋಲಿಸಿದ್ದು, ಸಿದ್ದರಾಮಯ್ಯನವರಂತಹ ನೀಚ ಮುಖ್ಯಮಂತ್ರಿ ಬೆಳೆಸಿದ್ದೇ ಮಹಾ ತಪ್ಪು ಎಂದು ಜೆಡಿಎಸ್ ವರಿಷ್ಠ ದೇವೇಗೌಡರು ಹೇಳಿದ್ದರು. ಮಾನ ಇದ್ದಿದ್ದರೆ ಸಿದ್ದರಾಮಯ್ಯ ಜೆಡಿಎಸ್ ಜೊತೆ ಹೋಗುತ್ತಿರಲಿಲ್ಲ. ಟೀಕೆ ಮಾಡುತ್ತೇನೆ ಎನ್ನುವುದಾದರೆ ಅದಕ್ಕೆ ತಿರುಗೇಟು ನೀಡಲು ನಾವು ಸಜ್ಜಾಗಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡರೂ ಈಗಲೂ ಕಾವೇರಿಯಲ್ಲೇ ವಾಸ ಮಾಡುತ್ತಿದ್ದಾರೆ. ವಿಧಾನಸೌಧದಲ್ಲಿ ಅವರಿಗೊಂದು ಕಚೇರಿಯನ್ನೂ ನೀಡಲಾಗಿದೆ. ಮರ್ಯಾದೆ ಇದ್ದುದ್ದರಿಂದಲೇ ಹ್ಯೂಬ್ಲೆಟ್ ವಾರ್ಚ್‍ನ್ನು ಉಡುಗೊರೆಯಾಗಿ ಪಡೆದರೇನೋ ಎಂದು ವ್ಯಂಗ್ಯವಾಡಿದರು.

ಶಾಸಕರನ್ನು ಗುರುಗ್ರಾಮದಲ್ಲಿ ಕೂಡಿ ಹಾಕಿಕೊಂಡಿಲ್ಲ. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ತಾವೆಲ್ಲರೂ ಒಂದೆಡೆ ಸೇರಿದ್ದೇವೆ. ಕುಮಾರಸ್ವಾಮಿ ಅವರು ರೆಸಾರ್ಟ್‍ನಲ್ಲಿ ಬರ ಅಧ್ಯಯನ ನಡೆಸುತ್ತಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾರೆ. ತಾಜ್ ವೆಸ್ಟ್‍ಲ್ಯಾಂಡ್‍ನಲ್ಲಿ ಕುರಿತು ನೀವು ಏನು ಮಾಡಿದ್ದೀರಿ
ಈ ಸಂದರ್ಭದಲ್ಲಿ ಕಟ್ಟಾಸುಬ್ರಹ್ಮಣ್ಯ ನಾಯ್ಡು, ಪಕ್ಷದ ವಕ್ತಾರ ಅಶ್ವಥ್ ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin