ಬಿಜೆಪಿಯವರಿಗೆ ನಾಚಿಕೆಯಾಗಬೇಕು : ಸಿದ್ದರಾಮಯ್ಯ ಕಿಡಿ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-01ಕಡೂರು, ಜ.17- ಬಿಜೆಪಿ ಪಕ್ಷದವರಿಗೆ ನಾಚಿಕೆಯಾಗಬೇಕು. ನೀತಿ ಪಾಠ ಹೇಳುವ ಪ್ರಧಾನಿ ನರೇಂದ್ರ ಮೋದಿಯವರು ಒಂದು ರಾಜ್ಯ ಸರ್ಕಾರವನ್ನು ಬೀಳಿಸುವ ನೀಚ ಕೆಲಸಕ್ಕೆ ಕೈ ಹಾಕಿ ಬಿಜೆಪಿ ನೀತಿ ಸಿದ್ಧಾಂತ ಎಂದು ಜನರಿಗೆ ಹೇಳುತ್ತಾ ವಾಮಮಾರ್ಗ ಹಿಡಿದಿರುವುದು ಎಂದಿಗೂ ಫಲಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಅವರು ಪಟ್ಟಣದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ನಾವೇ ಅವಧಿಯನ್ನು ಪೂರ್ಣಗೊಳಿಸಲಿದ್ದೇವೆ.

ಬಿಜೆಪಿ ಪಕ್ಷದವರಿಗೆ ಭ್ರಮನಿರಸನವಾಗಿದೆ. ಶಾಸಕರಿಳಿಗೆ 25ರಿಂದ 50 ಕೋಟಿ ರೂ. ಹಣ ಕೊಡುವ ಆಮಿಷ ವೊಡ್ಡುತ್ತಿದ್ದು. ಇದು ಯಾವ ಹಣ ಈ ಹಣ ಭ್ರಷ್ಟಚಾರದ ಹಣವಲ್ಲವೇ ಎಂದು ಪ್ರಶ್ನಿಸಿದರು.ಬೇರೆ ಪಕ್ಷದವರನ್ನು ಹಣಕೊಟ್ಟು ಕೊಂಡುಕೊಳ್ಳುವ ತಂತ್ರಗಾರಿಕೆಗೆ ಯಾವುದೇ ಶಾಸಕರು ಬಲಿಯಾಗುವುದಿಲ್ಲ. ಇದೊಂದು ಪ್ರಹಸನದ ಕಾರ್ಯವಾಗಿದೆ.

ನಮ್ಮ ಪಕ್ಷದ ಶಾಸಕರು ವೈಯಕ್ತಿಕವಾಗಿ ಬಾಂಬೆಗೆ ಹೋಗಿದ್ದಾರೆ. ಅವರ್ಯಾರು ಎಲ್ಲಿಗೂ ಹೋಗಬಾರದೆ ? ಬಿಜೆಪಿ ಅವರಿಗೆ ಮೌಲ್ಯಗಳೇ ಇಲ್ಲದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಮೇಶ್ ಜಾರಕಿಹೊಳಿ ಅವರು ನಾನು ಬಿಜೆಪಿಗೆ ಹೋಗುತ್ತೇನೆ ಕಾಂಗ್ರೆಸ್ ಬಿಡುತ್ತೇನೆ ಎಂದು ಎಲ್ಲಿಯಾದರೂ ಹೇಳಿಕೆ ನೀಡಿದ್ದಾರೆಯೇ? ಬಿಜೆಪಿ ಪಕ್ಷದ 104 ಶಾಸಕರನ್ನು ದೆಹಲಿಯಲ್ಲಿ ಬಂಧನದಲ್ಲಿ ಇಟ್ಟಿರುವುದು ಯಡಿಯೂರಪ್ಪನವರಿಗೆ ಶೋಭೆ ತರುವಂಥಹದ್ದಲ್ಲ. ಸರ್ಕಾರವನ್ನು ಅಭದ್ರಗೊಳಿಸಲು ಪ್ರಯತ್ನಿಸುವುದು ನಮ್ಮ ಶಾಸಕರುಗಳನ್ನು ಆಮಿಷವೊಡ್ಡಿ ದೆಹಲಿಗೆ ಕರೆಯುವುದನ್ನು ನೋಡಿದರೆ ಬಿಜೆಪಿಯವರಿಗೆ ರೈತರ ಬಗ್ಗೆಯಾಗಲಿ, ರಾಜ್ಯದ ಬರಗಾಲದ ಬಗ್ಗೆಯಾಗಲಿ ಚಿಂತನೆ ಇಲ್ಲದು ಆರೋಪಿಸಿದರು.

ತುರ್ತಾಗಿ ಮುಖ್ಯಮಂತ್ರಿಯಾಗಬೇಕು ಎಂದು ಆಶಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಜನ ಬಹುಮತ ನೀಡಿರುತ್ತಾರೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Facebook Comments