ಯಡಿಯೂರಪ್ಪನವರು ಈಗ ಸಿಕ್ಕಾಪಟ್ಟೆ ಬ್ಯುಸಿ : ಎಚ್.ಡಿ.ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

H-D-revanna

ಹಾಸನ, ಜ.17- ಯಾರು ಏನೇ ಮಾಡಿದರೂ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೆಸಾರ್ಟ್ ರಾಜಕಾರಣ ಮಾಡುವುದು ಬಿಟ್ಟು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಕೇಂದ್ರ ಸರ್ಕಾರದಿಂದ ಅನುದಾನ ತಂದು ರಾಜ್ಯದ ಹಿತ ಕಾಪಾಡಲಿ ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಬರಗಾಲವಿದೆ. ದೇವೇಗೌಡರು ಎಷ್ಟೋ ಬಾರಿ ಕೇಂದ್ರಕ್ಕೆ ಈ ಬಗ್ಗೆ ಪತ್ರ ಬರೆದಿದ್ದಾರೆ. ಮೊದಲು ಬಿಜೆಪಿಯವರು ಕಡತಗಳನ್ನು ತೆಗೆದು ನೋಡಲಿ. ಅನುದಾನ ತಂದ ಜನರ ಹಿತ ಕಾಪಾಡಲಿ.

ಇಲ್ಲದಿದ್ದರೆ ಲೋಕಸಭೆ ಅವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು. ಯಡಿಯೂರಪ್ಪನವರು ಈಗ ಬಹಳ ಬ್ಯುಸಿ. ಅವರು ಶಾಸಕರನ್ನು ಕಾಯುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದ ರೇವಣ್ಣ, ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ಕೊಡಿಸಿ ರಾಜ್ಯದ ಹಿತ ಕಾಪಾಡಲಿ ಎಂದು ಸವಾಲು ಹಾಕಿದರು.

ಲೋಕಸಭೆ ಚುನಾವಣೆಯಲ್ಲಿ ಶೋಭಾ ಅವರು ಹಾಸನದಲ್ಲಿ ಸ್ಪರ್ಧಿಸುವುದಾದರೆ ಸ್ವಾಗತ ಎಂದು ಇದೇ ವೇಳೆ ರೇವಣ್ಣ ತಿಳಿಸಿದರು.

Facebook Comments