ಒಳ ಮೀಸಲಾತಿ ನೀಡಲು ಸಮಯಾವಕಾಶ ಕೋರಿದ ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

CM-Kumaraswamy-Press-Meetಬೆಂಗಳೂರು, ಜ.17- ಎಡಗೈ ಸಮುದಾಯದ ಪ್ರಮುಖ ಬೇಡಿಕೆಯಾದ ಒಳ ಮೀಸಲಾತಿ ನೀಡಲು ಸಮ್ಮಿಶ್ರ ಸರ್ಕಾರ ಬದ್ಧವಾಗಿದೆ. ಅದಕ್ಕೆ ಸಮಯಾವಕಾಶ ನೀಡಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು. ನಗರದ ಅರಮನೆ ಮೈದಾನದಲ್ಲಿಂದು ನಡೆದ ಆದಿಜಾಂಬವ ಅಭಿವೃದ್ಧಿ ನಿಗಮ, ಉನ್ನತಿ, ಸಮೃದ್ಧಿ, ಐರಾವತ, ಪ್ರಗತಿ ಕಾಲೋನಿಗಳ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಿಮ್ಮ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದೇವೆ.

ಹಲವು ವರ್ಷಗಳ ಬೇಡಿಕೆಯಾದ ಒಳಮೀಸಲಾತಿಗಾಗಿ ಕೆಲವರು ಧಿಕ್ಕಾರ ಕೂಗುತ್ತಿರುವುದನ್ನು ಗಮನಿಸಿದ್ದೇನೆ. ಸರ್ಕಾರ ಕೆಲವು ತೀರ್ಮಾನ ಮಾಡಲು ಸಿದ್ಧವಿದೆ. ಸಮಯಾವಕಾಶ ನೀಡಿ ಎಲ್ಲರ ಜತೆ ಕುಳಿತು ಕಾನೂನಾತ್ಮಕ ಅಂಶಗಳ ಬಗ್ಗೆ ಚರ್ಚೆ ಮಾಡಿ ಬೇಡಿಕೆ ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.

ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ಎರಡು ಶಕ್ತಿಗಳು. ಅವರು ಅಣ್ಣ-ತಮ್ಮಂದಿರಂತೆ. ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರನ್ನು ಬೇರ್ಪಡಿಸಬೇಡಿ. ಹಿರಿಯರಾದ ಖರ್ಗೆ ಅವರು ಯಾವುದೇ ಸಭೆ-ಸಮಾರಂಭದಲ್ಲೂ ವಿರೋಧ ವ್ಯಕ್ತಪಡಿಸಿಲ್ಲ. ನಿಮಗೆ ವಂಚನೆಯಾಗಿದೆ ಎಂಬ ನಿಮ್ಮ ಭಾವನೆಯನ್ನು ಸರಿಪಡಿಸುತ್ತೇವೆ.

ನಮ್ಮ ಮೇಲೆ ನಂಬಿಕೆ ಇಡಿ. ಸರ್ವರಿಗೂ ಸಮಬಾಳು-ಸಮಪಾಲು ನಮ್ಮ ಧ್ಯೇಯ ಎಂದರು. ಹಲವು ಅನಿಶ್ಚಿತತೆಯನ್ನು ಸರಿ ಪಡಿಸಿಕೊಂಡಿದ್ದೇವೆ. ಎಲ್ಲ ಬೇಡಿಕೆ ಈಡೇರಿಕೆಗೆ ಸರ್ಕಾರ ನಿಮ್ಮ ಜೊತೆ ಇದೆ. ಸ್ವಲ್ಪ ಸಮಯ ಕೊಡಿ ಎಂದರು. ಧ್ವನಿ ಇಲ್ಲದವರಿಗೆ ಶಕ್ತಿ ತುಂಬಲು ಸರ್ಕಾರ ಬದ್ಧವಾಗಿದೆ.

ಹಲವು ಪ್ರಾಧಿಕಾರ ರಚಿಸಿದ್ದು, ಸಮುದಾಯದ ಉಪಯೋಗಕ್ಕಾಗಿ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಪರಿಶಿಷ್ಟ ಜಾತಿ/ಸಮುದಾಯದ ವ್ಯಕ್ತಿಯನ್ನು ಕೆಪಿಎಸ್‍ಸಿ ಅಧ್ಯಕ್ಷರನ್ನಾಗಿ ನೇಮಿಸಿದ್ದಾ. ಯಾವ ಸಮುದಾಯಕ್ಕೂ ಸೌಲಭ್ಯ ವಂಚಿಸುವುದಿಲ್ಲ. ಸಚಿವ ಪ್ರಿಯಾಂಕ್ ಖರ್ಗೆ ದೂರದೃಷ್ಟಿ ಇರುವ ನಾಯಕ ಎಂದು ಪ್ರಶಂಸಿಸಿದರು.

ನಿಗಮಗಳಿಗೆ ಮುಂದಿನ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. ನಿಗಮದ ಯೋಜನೆಗಳ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಉಪ ಮುಖ್ಯಮಂತ್ರಿ ಪರಮೇಶ್ವರ್, ಶೋಷಿತ ಸಮುದಾಯಗಳು ಅಭಿವೃದ್ದಿಯಾಗಬೇಕು. ನಿಗಮಕ್ಕೆ ಹೆಚ್ಚು ಹಣ ಕೊಡಬೇಕು ಎಂದು ಒತ್ತಾಯಿಸುವುದಾಗಿ ಹೇಳಿದರು.

ಪರಿಶಿಷ್ಟ ಜಾತಿ/ಸಮುದಾಯದಲ್ಲಿ ಯಾವ ಸಮುದಾಯ ಎಷ್ಟು ಸವಲತ್ತು ಪಡೆದಿದೆ, ಮೀಸಲಾತಿ ಎಷ್ಟು ಪ್ರಯೋಜನವಾಗಿದೆ ಎಂದು ಅಧ್ಯಯನ ನಡೆಸಲು ಸದಾಶಿವ ಆಯೋಗ ರಚಿಸಲಾಗಿದೆ. ಆ ವರದಿ ಸರ್ಕಾರದ ಬಳಿ ಇದೆ. ವರದಿ ಬಗ್ಗೆ ಸರ್ಕಾರದಲ್ಲಿ ಇನ್ನೂ ಚರ್ಚೆಯಾಗಿಲ್ಲ. ಆದಷ್ಟು ಶೀಘ್ರವಾಗಿ ಈ ಚರ್ಚೆ ನಡೆಯಬೇಕು. ನಾವ್ಯಾರು ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ವಿರುದ್ಧವಾಗಿಲ್ಲ. ಯಾರು ಅನಗತ್ಯವಾಗಿ ತಪ್ಪು ತಿಳಿದುಕೊಳ್ಳಬಾರದು ಎಂದು ಮನವಿ ಮಾಡಿದರು.

ಸಂಸದ ಕೆ.ಎಚ್. ಮುನಿಯಪ್ಪ ಮಾತನಾಡಿ, ಹದಿನೈದು ವರ್ಷದಿಂದ ನಾವು ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ. ಬಹುಮತ ಇರುವ ಕೇಂದ್ರದ ಬಿಜೆಪಿ ಸರ್ಕಾರ ಒಳ ಮೀಸಲಾತಿ ಕೊಡಲು ವಿಫಲವಾಗಿದೆ. ಎಲ್ಲಾ ಮೇಲ್ಜಾತಿಗೆ ಶೇ.10 ಮೀಸಲಾತಿ ಕೊಡಲಾಗಿದೆ, ಅದು ಸ್ವಾಗತಾರ್ಹ. ಆದರೆ ಚುನಾವಣೆ ಸಮೀಪದಲ್ಲಿ ಮಾಡಿ ಜನರನ್ನು ವಂಚಿಸಲಾಗಿದೆ.

ನಂತರ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಸಂವಿಧಾನ ಉಳಿಸಬೇಕು. ಆಗ ಮಾತ್ರ ನಮಗೆ ಎಲ್ಲ ಸೌಲತ್ತುಗಳು ಸಿಗುತ್ತವೆ. ಇತ್ತಿಚೆಗೆ ಸಂವಿಧಾನಕ್ಕೆ ಧಕ್ಕೆ ತರಲಾಗುತ್ತಿದೆ. ಇದೆ ಪರಿಸ್ಥಿತಿ ಮುಂದುವರೆದರೆ ಸಮುದಾಯದ ಉಳಿವು ಕಷ್ಟವಾಗಲಿದೆ ಎಂದರು.

Facebook Comments