ಲೋಕಸಭಾ ಚುನಾವಣೆ ಜೆಡಿಎಸ್‍ ತಯಾರಿ, ಅಲ್ಪಸಂಖ್ಯಾತರ ಬೃಹತ್ ಸಮಾವೇಶ

ಈ ಸುದ್ದಿಯನ್ನು ಶೇರ್ ಮಾಡಿ

jdsಬೆಂಗಳೂರು, ಜ.17-ಮುಂಬರುವ ಲೋಕಸಭಾ ಚುನಾವಣೆಯ ಸಿದ್ಧತೆಯಲ್ಲಿ ತೊಡಗಿರುವ ಜೆಡಿಎಸ್ ಇಂದು ನಗರದಲ್ಲಿ ಬೃಹತ್ ಅಲ್ಪಸಂಖ್ಯಾತರ ಸಮಾವೇಶವನ್ನು ನಡೆಸಿತು. ನಗರದ ಅರಮನೆ ಮೈದಾನದಲ್ಲಿ ಮೊದಲ ಬಾರಿಗೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಜೆಡಿಎಸ್ ಸಮಾವೇಶಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಎಸ್.ವಿಶ್ವನಾಥ್ ನೇತೃತ್ವ ವಹಿಸಿ ಚುನಾವಣಾ ಸಿದ್ಧತೆಯನ್ನು ಆರಂಭಿಸಿದರು.

ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಪ್ರಧಾನಿಯಾಗಿದ್ದಾಗ ಅಲ್ಪಸಂಖ್ಯಾತರಿಗೆ ನೀಡಿದ ಕಾರ್ಯಕ್ರಮಗಳು, ಒದಗಿಸಿದ ಸೌಲಭ್ಯಗಳೂ ಕುಮಾರಸ್ವಾಮಿಯವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತರಿಗೆ ನೀಡಿದ ಕೊಡುಗೆ ಸೇರಿದಂತೆ ಹತ್ತು, ಹಲವು ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡುವಂತೆ ನಾಯಕರು ಕರೆ ನೀಡಿದರು.

ಜೆಡಿಎಸ್ ಜಾತ್ಯತೀತ ಪಕ್ಷವಾಗಿದ್ದು, ಕಾಂಗ್ರೆಸ್‍ನೊಂದಿಗೆ ಮೈತ್ರಿಯಾಗಿ ತತ್ವಕ್ಕೆ ಬದ್ಧವಾದ ರೀತಿಯಲ್ಲೇ ಮುನ್ನಡೆಯುತ್ತಿದ್ದು, ಎಂದಿಗೂ ಅಲ್ಪಸಂಖ್ಯಾತರ ಪರವಾಗಿಯೇ ಇದೆ. ಇದರಲ್ಲಿ ಅನುಮಾನ ಬೇಡ ಎಂಬ ಸ್ಪಷ್ಟನೆ ನೀಡಲಾಯಿತು.

ಚುನಾವಣೆಗೆ ಅಗತ್ಯವಿರುವ ಪಕ್ಷ ಸಂಘಟನೆ, ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುವುದು, ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುವುದು ಸೇರಿದಂತೆ ಇನ್ನಿತರ ಚುನಾವಣಾ ಕಾರ್ಯತಂತ್ರಗಳನ್ನು ಕಾರ್ಯಕರ್ತರು ಕೈಗೊಳ್ಳುವ ಮೂಲಕ ಕಾರ್ಯನಿರ್ವಹಿಸಬೇಕಿದೆ.

ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗದಂತೆ ಪ್ರತಿಯೊಬ್ಬ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಅಲ್ಪಸಂಖ್ಯಾತರಿಗೂ ಜೆಡಿಎಸ್ ಎಲ್ಲಾ ರೀತಿಯ ಸ್ಥಾನಮಾನ ಕಲ್ಪಿಸುತ್ತಾ ಬಂದಿದೆ. ಮುಂದೆಯೂ ಇದಕ್ಕೆ ಯಾವುದೇ ಚ್ಯುತಿ ಬರುವುದಿಲ್ಲ ಎಂಬ ಸಂದೇಶ ರವಾನಿಸಲಾಯಿತು.

ಇಂದು ನಡೆದ ಈ ಸಮಾವೇಶದಲ್ಲಿ ಸಚಿವರಾದ ಎಂ.ಸಿ.ಮನಗೂಳಿ, ಸಿ.ಎಸ್.ಪುಟ್ಟರಾಜು, ಶಾಸಕ ಗೋಪಾಲಯ್ಯ, ಎ.ಟಿ.ನಾರಾಯಣಸ್ವಾಮಿ, ವಿಧಾನಪರಿಷತ್ ಉಪಸಭಾಪತಿ ಧರ್ಮೇಗೌಡ, ವಿಧಾನಪರಿಷತ್ ಸದಸ್ಯ ಶರವಣ, ಭೋಜೇಗೌಡ, ಕೆ.ಟಿ.ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಪ್ರಚಾರ ಸಮಿತಿ ವೈ.ಎಸ್.ವಿ.ದತ್ತ, ವೀರಭದ್ರಯ್ಯ , ಮಂಜುನಾಥ್, ಬಚ್ಚೇಗೌಡ, ಕುಪೇಂದ್ರರೆಡ್ಡಿ, ಜಫರುಲ್ಲಾಖಾನ್, ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಸೇರಿದಂತೆ ಹಲವರು ಸಮಾವೇಶದಲ್ಲಿ ಭಾಗವಹಿಸಿದ್ದರು.

 

Facebook Comments