ನಾಳೆ ಕಾಂಗ್ರೆಸ್ ಶಾಸಕಾಂಗ ಸಭೆ, ರಾಜಕೀಯ ಹೈಡ್ರಾಮಾಗೆ ಹೊಸ ಟ್ವಿಸ್ಟ್..?
ಬೆಂಗಳೂರು, ಜ.17-ರಾಜ್ಯದಲ್ಲಿ ರಾಜಕೀಯ ಕದನ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಮೈತ್ರಿ ಸರ್ಕಾರವನ್ನು ಉಳಿಸುವ, ಉರುಳಿಸುವ ಹಾವು-ಏಣಿ ಆಟ ಮುಂದುವರೆದಿದೆ. ಆಪರೇಷನ್ ಕಮಲ ಠುಸ್ ಆಗಿದೆ ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತಿದ್ದರೂ, ಇನ್ನೆರಡು ದಿನಗಳ ಕಾಲ ಕಾದು ನೋಡಿ ಏನಾಗುತ್ತದೆ ಎಂದು ಬಿಜೆಪಿ ಆತಂಕದ ಪರಿಸ್ಥಿತಿ ನಿರ್ಮಾಣ ಮಾಡಿದೆ. ಒಟ್ಟಾರೆ ಡೋಲಾಯಮಾನ ಪರಿಸ್ಥಿತಿ ಮುಂದುವರೆದಿದೆ.
ಈ ನಡುವೆ ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅತೃಪ್ತ ಶಾಸಕರು ಅಡ ಕತ್ತರಿಯಲ್ಲಿ ಸಿಲುಕಿಕೊಂಡಂತಾಗಿದೆ. ಸಮ್ಮಿಶ್ರ ಸರ್ಕಾರದ ಅಸ್ತಿತ್ವದ ಬುಡ ಅಲ್ಲಾಡಿಸಲು ಆಪರೇಷನ್ ಕಮಲಕ್ಕೆ ಒಳಗಾಗಿ ರಹಸ್ಯ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎನ್ನಲಾದ ಹಲವು ಕಾಂಗ್ರೆಸ್ ಶಾಸಕರನ್ನು ಬಿಲದಿಂದ ಹೊರತೆಗೆಯಲು ಕಾಂಗ್ರೆಸ್ ರಣತಂತ್ರ ರೂಪಿಸಿದ್ದು, ನಾಳೆ ಶಾಸಕಾಂಗ ಪಕ್ಷದ ಸಭೆ ಕರೆದಿದೆ.
ಕಡ್ಡಾಯವಾಗಿ ಹಾಜರಾಗಬೇಕು, ಹಾಜರಾಗದಿದ್ದರೆ ತಮ್ಮ ಅನುಪಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅನುಚ್ಛೇದ 10ರ ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದೆ.
ಹಲವು ಶಾಸಕರು ಈ ನೋಟೀಸ್ಗೆ ಮನ್ನಣೆ ನೀಡುವುದಿಲ್ಲ. ಸಭೆಗೂ ಮುನ್ನವೇ ರಾಜೀನಾಮೆ ನೀಡುತ್ತೇವೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ. ಇವರ ಮನವೊಲಿಸುವ ಕಸರತ್ತು ಮುಂದುವರೆದಿದೆ.
ನಾಳಿನ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾದವರ ವಿರುದ್ಧ ಕಾಂಗ್ರೆಸ್ ಪಕ್ಷ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಏನಾದರೂ ಕ್ರಮಕೈಗೊಂಡರೆ ಪ್ರತಿಪಕ್ಷ ಬಿಜೆಪಿಗೆ ಅನುಕೂಲವಾಗುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ. ಸದನದ ಬಲವನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿರುವ ಬಿಜೆಪಿಗೆ ಇದು ವರವಾಗಿ ಪರಿಣಮಿಸುತ್ತದೆ ಎನ್ನಲಾಗಿದೆ. ಒಟ್ಟಾರೆ ರಾಜಕೀಯ ಬೆಳವಣಿಗೆಗಳು ಕ್ಷಣ ಕ್ಷಣದ ಕುತೂಹಲ ಕೆರಳಿಸಿವೆ.
ಮುಂಬೈನಲ್ಲಿರುವ ಅತೃಪ್ತ ಶಾಸಕರು ಬೆಂಗಳೂರಿಗೆ ಸಂಜೆ ವೇಳೆಗೆ ಹಿಂತಿರುಗಲಿದ್ದಾರೆ ಎಂದು ಕಾಂಗ್ರೆಸ್ನವರು ಹೇಳುತ್ತಿದ್ದಾರೆ. ನಾಳೆ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಮತ್ತೊಂದು ಮೂಲದ ಪ್ರಕಾರ ನಾಲ್ಕೈದು ಮಂದಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿದ್ದಾರೆ ಎಂದು ತಿಳಿದುಬಂದಿದೆ.
ಯಾವುದೇ ಕಾರಣಕ್ಕೂ ಅತೃಪ್ತರು ರಾಜೀನಾಮೆ ಕೊಡದಂತೆ ಎಚ್ಚರ ವಹಿಸಬೇಕು ಮತ್ತು ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡು ಪಕ್ಷದ ಪರ ಹೇಳಿಕೆಗಳನ್ನು ನೀಡುವಂತೆ ಮಾಡಲು ಹಲವರಿಗೆ ಜವಾಬ್ದಾರಿಯನ್ನು ವಹಿಸಲಾಗಿದೆ.
ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಉಮೇಶ್ ಜಾಧವ್, ನಾಗೇಂದ್ರ ಮುಂತಾದವರು ಇನ್ನೂ ಕಾಂಗ್ರೆಸ್ನವರ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದೇ ಹೇಳಲಾಗುತ್ತಿದೆ. ಇವರೆಲ್ಲ ಮುಂಬೈನಿಂದ ಹಿಂತಿರುಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಅವರ ಕೈಗೆ ಸ್ಪೀಕರ್ ಸಿಗದಂತೆ ಮಾಡುವ ವ್ಯವಸ್ಥೆಯನ್ನೂ ಮಾಡಲಾಗಿದೆ.
ಅತೃಪ್ತರು ರಾಜೀನಾಮೆ ನೀಡುವುದಾದರೆ ಸ್ಪೀಕರ್ಗೆ ನೀಡಬೇಕು. ಒಂದೆರಡು ದಿನ ಅವರಿಗೆ ಸ್ಪೀಕರ್ ಲಭ್ಯವಾಗದಿದ್ದರೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿಲ್ಲ ಎಂಬ ಹಿನ್ನೆಲೆಯಲ್ಲಿ ಅವರನ್ನು ಅನರ್ಹಗೊಳಿಸಬಹುದಾಗಿದೆ. ಅನರ್ಹಗೊಂಡರೆ ಅವರು ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ 10 ವರ್ಷಗಳ ಕಾಲ ಸ್ಪರ್ಧಿಸುವಂತಿಲ್ಲ.
ಈ ಎಲ್ಲಾ ರಾಜಕೀಯ ಲೆಕ್ಕಾಚಾರ ಹಾಕಿ ಕಾನೂನು ಅಂಶಗಳನ್ನು ಗಮನಿಸಿ ಶಾಸಕಾಂಗ ಪಕ್ಷದ ಸಭೆ ಕರೆದು ಶಾಸಕರಿಗೆ ನೋಟೀಸ್ ನೀಡಲಾಗಿದೆ.
ಅತೃಪ್ತರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ, ಪಕ್ಷ ಯಾವ ಕ್ರಮ ಕೈಗೊಳ್ಳುತ್ತದೆ, ರಾಜಕೀಯ ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಹರಿಯಾಣದ ಗುರುಗ್ರಾಮ ರೆಸಾರ್ಟ್ನಲ್ಲಿ ಬಿಜೆಪಿಯವರ ವಾಸ್ತವ್ಯ ಮುಂದುವರೆದಿದೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ನಾಯಕರ ಆರೋಪ-ಪ್ರತ್ಯಾರೋಪಗಳು ಕೂಡ ಮುಂದುವರೆದಿದೆ. ಕ್ಷಣ ಕ್ಷಣದ ರಾಜಕೀಯ ಮೇಲಾಟಗಳು ನಡೆಯುತ್ತಲೇ ಇವೆ. ಏನಾಗುತ್ತದೆ ಎಂಬುದು ಕಾದು ನೋಡಬೇಕಾಗಿದೆ.