ಇದ್ದಕ್ಕಿದ್ದಂತೆ ಬೇರೊಂದು ರೆಸಾರ್ಟ್’ಗೆ ಬಿಜೆಪಿ ಶಾಸಕರು ಶಿಫ್ಟ್ ..!

ಈ ಸುದ್ದಿಯನ್ನು ಶೇರ್ ಮಾಡಿ

BJP--01

ಬೆಂಗಳೂರು,ಜ.18-ಇತ್ತ ಕಾಂಗ್ರೆಸ್‍ನ ನಿರ್ಣಾಯಕ ಶಾಸಕಾಂಗ ಸಭೆ ನಡೆಯಲು ವೇದಿಕೆ ಸಿದ್ಧಗೊಂಡಿದ್ದರೆ ಅತ್ತ ಹರಿಯಾಣದ ಗುರುಗ್ರಾಮದಲ್ಲಿರುವ ಬಿಜೆಪಿ ಶಾಸಕರನ್ನು ದಿಢೀರನೆ ಬೇರೊಂದು ರೆಸಾರ್ಟ್‍ಗೆ ಶಿಫ್ಟ್ ಮಾಡಿರುವುದು ಭಾರೀ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಪ್ರಸ್ತುತ ಬಿಜೆಪಿ ಶಾಸಕರು ಗುರುಗ್ರಾಮದ ಐಟಿಸಿ ಗ್ರ್ಯಾಂಡ್ ಭಾರತ್ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ ಅರ್ಧಕ್ಕೂ ಹೆಚ್ಚು ಶಾಸಕರನ್ನು ಲೆಮೆನ್ ಟ್ರೀ ರೆಸಾರ್ಟ್‍ಗೆ ಶಿಫ್ಟ್ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಎಲ್ಲವೂ ನಿರೀಕ್ಷೆಯಂತೆ ಇಂದು ಸಂಜೆ ವೇಳೆಗೆ ರೆಸಾರ್ಟ್‍ನಿಂದ ಶಾಸಕರು ಬೆಂಗಳೂರಿನತ್ತ ಮುಖ ಮಾಡಬೇಕಿತ್ತು. ಆದರೆ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಇನ್ನು ಎರಡು ದಿನ ರೆಸಾರ್ಟ್‍ನಲ್ಲೇ ಇರಬೇಕೆಂದು ಶಾಸಕರಿಗೆ ಸೂಚನೆ ಕೊಟ್ಟಿದ್ದಾರೆ.   ಹೀಗಾಗಿಯೇ ಅರ್ಧದಷ್ಟು ಮಂದಿ ಶಾಸಕರನ್ನು ಇಂದು ಬೆಳಗ್ಗೆ ಶಿಫ್ಟ್ ಮಾಡಲಾಯಿತು ಎಂದು ಹೇಳಲಾಗುತ್ತಿದೆ.

ರೆಸಾರ್ಟ್‍ನಲ್ಲಿ 95ಕ್ಕೂ ಹೆಚ್ಚು ಶಾಸಕರು ವಾಸ್ತವ್ಯ ಹೂಡಿದ್ದಾರೆ. ಇದರಲ್ಲಿ 40ಕ್ಕೂ ಹೆಚ್ಚು ಶಾಸಕರನ್ನು ಲೆಮೆನ್ ಟ್ರೀ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡುವಂತೆ ಸೂಚಿಸಲಾಗಿದೆ.

ಶಾಸಕಾಂಗ ಸಭೆ ಮೇಲೆ ಕುತೂಹಲ:
ಇಂದು ನಡೆಯುವ ಶಾಸಕಾಂಗ ಸಭೆ ಮೇಲೆ ಬಿಜೆಪಿ ರಾಜಕೀಯ ಬೆಳವಣಿಗೆಗಳು ನಿಂತಿವೆ. ಒಂದು ವೇಳೆ ಭಿನ್ನಮತೀಯ ಶಾಸಕರು ಶಾಸಕಾಂಗ ಸಭೆಗೆ ಗೈರಾದರೆ ಬಹುತೇಕ ಕಾಂಗ್ರೆಸ್ ತೊರೆಯುವುದು ಖಚಿತ ಎನ್ನಲಾಗುತ್ತಿದೆ.

ಇಂದು ಶಾಸಕಾಂಗ ಸಭೆಗೆ ಹಾಜರಾದರೂ ಕೆಲವರು ನಾಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮಾನಸಿಕವಾಗಿ ಸಿದ್ಧತೆ ನಡೆಸಿದ್ದಾರೆ. ಬಿಜೆಪಿ ಶಾಸಕರು ನಗರಕ್ಕೆ ಹಿಂದಿರುಗಿದರೆ ಕಾಂಗ್ರೆಸ್-ಜೆಡಿಎಸ್‍ನವರು ತಮ್ಮ ಪಕ್ಷದ ಶಾಸಕರನ್ನು ಸೆಳೆಯಬಹುದೆಂಬ ಭೀತಿಯ ಹಿನ್ನೆಲೆಯಲ್ಲಿ ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ಬಿಜೆಪಿ ಎಚ್ಚರಿಕೆ ಹೆಜ್ಜೆ ಇಡುತ್ತಿದೆ.

ಒಬ್ಬೊಬ್ಬ ಶಾಸಕರ ಪಾತ್ರವೂ ಕೂಡ ನಿರ್ಣಾಯಕವಾಗಿರುವುದರಿಂದಲೇ ಒಗ್ಗಟ್ಟು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರೆಸಾರ್ಟ್‍ನಲ್ಲೇ ಶಾಸಕರನ್ನು ಇರುವಂತೆ ಹೈಕಮಾಂಡ್ ಸೂಚಿಸಿದೆ.

ಮೂಲಗಳ ಪ್ರಕಾರ ನಾಳೆ ದೋಸ್ತಿ ಸರ್ಕಾರಕ್ಕೆ ನಿರ್ಣಾಯಕ ದಿನವಾಗಲಿದ್ದು, ಕೆಲ ಶಾಸಕರು ರಾಜೀನಾಮೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇತ್ತ ರಾಜೀನಾಮೆ ನೀಡಿದರೆ ಬಿಜೆಪಿ ಚಟುವಟಿಕೆಗಳು ಇನ್ನಷ್ಟು ಗರಿಗೆದರಲಿವೆ.

Facebook Comments

Sri Raghav

Admin